Sunday, 12 January 2020

ಸಂಯಮ ಮೀರಿದೆ


ಸಂಯಮ ಮೀರಿದೆ

ತೀರ ನೋಡುತಾ ದೂರ ಸರಿದಿದೆ ಮನ
ಯಾರೋ ಚಾಚಿ ಹೋದರು ಮೌನ
ನೂರು ಅಲೆಗಳ ಕದನ
ಮನದಲಿ ನಿನ್ನ ನೆನಪಲ್ಲೆ ಗಾಯನ.


ನಿನ್ನ ಪ್ರೀತಿಯ ಸೆಳೆತಕ್ಕೆ
ನನ್ನ ಸಂಯಮ ಜಾರಿದೆ
ಹೃದಯ ನಿಯಮ ಮುರಿದಿದೆ
ಬಯಕೆ ನಿನ್ನ ಬೆಸೆದಿದೆ


ಜೋರು ಜೋರು ಅಲೆಗಳ ಬಡಿತ
ನನ್ನೆದೆ ವೀಣೆಗೆ ನೀ ಸಂಗೀತ.
ನಿನ್ನ ನೆನಪಲೆ ಇದು ನಿಯಮಿತ
ಹೃದಯದ ಅರಮನೆಗೆ ನಿನಗೆ ಸ್ವಾಗತ



Sunday, 5 January 2020

ಅವನು ನನ್ನವ"ನಲ್ಲ"









ಅವನು ನನ್ನವ"ನಲ್ಲ"

ಹುಡುಗಿಯರೇ ಹೀಗೆ ಹುಡುಗರಿಗೆ ಮೋಸ ಮಾಡಿ ಕೈಕೊಟ್ಟು ಬಿಡುತ್ತಾರೆ ಅದೆಷ್ಟು ಹುಡುಗರ ಮೊದಲ ಲವ್ ಸ್ಟೋರಿ ಫೇಲ್ಯೂರ್. ಹಾಗಾದರೆ ಅವರನ್ನು ಪ್ರೀತಿಸಿದ ಹುಡುಗಿಯರದ್ದು...
ಲವ್ ಫೇಲ್ಯೂರ್ ಆದ ಹುಡುಗರೆಲ್ಲ ದೇವದಾಸ್ ಥರ ದಾಡಿ ಬಿಟ್ಟು ಎಣ್ಣೆ ಅಂಗಡಿಯಲ್ಲಿ ಕುಳಿತಿರುತ್ತಾರಾ?
ಹಾಗಾದರೆ ಹುಡುಗಿಯರು ಎಲ್ಲವನ್ನು ಮರೆತು ಬೇರೆ ಹುಡುಗನನ್ನು ಮದುವೆಯಾಗಿ ಹಾಯಾಗಿರುತ್ತಾರಾ?
ಮದುವೆಯಾಗಿ ಐದು ವರ್ಷವಾಯಿತು ಇವಾಗಲು ಅವನನ್ನು ಪ್ರೀತಿಸುತ್ತೇನೆ ಯಾಕ್ ಗೊತ್ತಾ ನಾನು ಅವನಿಗೆ ಮಾಡಿದ ಮೋಸಕ್ಕೆ ಇನ್ನೊಂದು ಅರ್ಥದಲ್ಲಿ ನನಗೆ ನಾನು ಮಾಡಿಕೊಂಡ ಮೋಸ.
ಹೆತ್ತ ತಂದೆ-ತಾಯಿಯರಿಗೆ ಮೋಸ ಮಾಡಲಾಗದೆ ನಾನೇ ನನಗೆ ಮಾಡಿಕೊಂಡ ಮೋಸ.
ವಿಶ್ ಯು ಹ್ಯಾಪಿ ಬರ್ಥಡೇ ಎಸ್ಪಿ... ಪದೇ ಪದೇ ಅದೇ ಮೆಸೇಜನ್ನು ನೋಡಿಕೊಂಡು ಸ್ಮಿತಾ ಭಾವುಕಳಾದಳು.
ಪ್ರಕಾಶ್ ಅವನ ಹೆಸರನ್ನು ಅವಳ ಹೆಸರಿಗೆ ಯಾವತ್ತೂ ಸೇರಿಸಿ ಬಿಟ್ಟಿದ್ದ. ಯಾವುದೋ ಅಪರಿಚಿತ ನಂಬರ್ ನಿಂದ ಮೆಸೇಜ್ ಬಂದಿದ್ದರು ಅವಳಿಗೆ ಗೊತ್ತು ಅದು ಪ್ರಕಾಶನದ್ದೆ ಎಂದು.
ಸ್ಮಿತಾ ಅವನ ಎಲ್ಲ ನಂಬರ್ ಗಳನ್ನು ಬ್ಲಾಕ್ ಮಾಡಿದ್ದಳು ಆದರೂ ವರ್ಷಕ್ಕೊಮ್ಮೆ ಬರುವ ಅವನ ವಿಶ್ ಗೆ ಅವಳು ವರ್ಷವಿಡೀ ಕಾಯುತ್ತಿದ್ದಳು.
ಸ್ಮಿತಾಳದ್ದು  ಅರೆಂಜ್ ಮ್ಯಾರೇಜ್ ಅಪ್ಪ-ಅಮ್ಮ ನೋಡಿದ ಹುಡುಗ ಶ್ರೀಮಂತನಲ್ಲದಿದ್ದರೂ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು.
ಏನ್ ಸ್ಮಿತಾ ಯಾಕಿಷ್ಟು ಸಪ್ಪೆಯಾಗಿದ್ದಿಯಾ? ಇನ್ಮೇಲೆ ನೀನು ನಗು ನಗುತ್ತಾ ಇರಬೇಕು.
ಮಾತಿನ ಮಧ್ಯ ಸ್ಮಿತಾಳ ಮೆಸೇಜ್ ಟ್ಯೂನ್ ರಿಂಗಣಿಸಿತು.
  "ಹಾಯ್ .. ಮದುವೆಗೆ ಬರಬಾರದು ಅಂದುಕೊಂಡಿದ್ದೆ ಕೊನೆಯ ಬಾರಿ ನಿನ್ನ ನೋಡೋಣ ಅಂತ ಬಂದೆ. ಮಂಟಪದಲ್ಲಿ ರಾಜಕುಮಾರಿಯ ಹಾಗೆ ಕಾಣಿಸುತ್ತಿದ್ದಿಯಾ ವಿಶ್ ಯು ಹ್ಯಾಪಿ ಮ್ಯಾರೀಡ್ ಲೈಫ್ ಎಸ್.ಪಿ."
ಸ್ಮಿತಾ ಸೈಲೆಂಟಾಗಿ ಮೊಬೈಲ್ ಸ್ಕ್ರೀನ್ ಆಫ್ ಮಾಡಿದಳು.
ಪ್ರಮೋದ್ ಮುಂದುವರೆದು   "ನೋಡು ಸ್ಮಿತಾ ನಾನು ನಿನಗೊಂದು ವಿಷಯ ಹೇಳ್ತೀನಿ ಮದುವೆಗೆ ಮುಂಚೆ ನೀನು ಯಾರನ್ನಾದರೂ ಇಷ್ಟ ಪಟ್ಟಿರಬಹುದು ಅಥವಾ ಯಾರಾದರೂ ನಿನಗೆ ಪ್ರೊಪೋಸ್ ಮಾಡಿರಬಹುದು.
ಕಾಲೇಜು ಜೀವನದಲ್ಲಿ ಇದೆಲ್ಲ ಸಾಮಾನ್ಯ. ಇದು ಯಾವುದು ನಾನು ನಿನ್ನ ಕೇಳುವುದಿಲ್ಲ. ಯಾವ ಘಟನೆಯನ್ನು ನೀನು ಹೇಳಬೇಕಾಗಿಯೂ ಇಲ್ಲ.
ಇವತ್ತಿನಿಂದ ನೀನು ನನ್ನ ಹೆಂಡತಿ ಮುಂದೆ ನನ್ ಜೊತೆ ಚೆನ್ನಾಗಿದ್ದರೆ ಸಾಕು."
ಇಷ್ಟೇ ಸಾಕಿತ್ತು ಸ್ಮಿತಾಗೆ ಪ್ರಕಾಶ್ ನ ನಂಬರ್ ಬ್ಲಾಕ್ ಮಾಡಲು.
ಸ್ಮಿತಾ ಮಧ್ಯಮ ವರ್ಗದ ಚಂಚಲ ಸ್ವಭಾವದ ಹುಡುಗಿ ಕಾಲೇಜಿನಲ್ಲಿ ಓದುವುದಕ್ಕಿಂತ ಅವರವರ ಹೆಸರು ಮಧ್ಯೆ ತನ್ನ ಹೆಸರನ್ನು ತಳುಕು ಹಾಕಿಕೊಂಡು ಪ್ರಸಿದ್ಧಿ ಪಡೆದಿದ್ದೆ ಜಾಸ್ತಿ.
ಒಬ್ಬನಂತೂ ಅವಳ ನಗುವಿನ ಮೋಡಿಗೆ ಮರುಳಾಗಿ ಸೆಲ್ಫೋನ್ ಗಿಫ್ಟ್ ನೀಡಿದ್ದ ಆದರೆ ಫ್ರೆಂಡ್ ಅಂತಲೇ ಸ್ವೀಕರಿಸಿದಳು ಸ್ಮಿತಾ.
ಅದೊಂಥರಾ ಸ್ಮೈಲ್.
ಹೆಚ್ಚಿನ ಹುಡುಗರು ಅವಳ ನಗುವಿಗೆ ಹುಚ್ಚರಾಗಿ ಬಿಡುತ್ತಿದ್ದರು.
ಸೌಮ್ಯಳ ಅಣ್ಣ ಪ್ರಕಾಶ್ ಬೆಂಗಳೂರಿನ ಒಂದು ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ. ಸೌಮ್ಯ ಹತ್ತಿರ ಪೋನ ಇಲ್ಲದ ಕಾರಣ ಸ್ಮಿತಾಳ  ಫೋನ್ ನಂಬರ್ ಕೊಟ್ಟಿದ್ದಳು. ಅವನು ಅವಳಿಗೆ ಕಾಲ್ ಮಾಡಿ ತಂಗಿಯ ಕುಶಲೋಪಚಾರ ವಿಚಾರಿಸುತ್ತಿದ್ದನು. ಹೀಗೆ ಅವರಿಬ್ಬರ ನಡುವೆ ಮಾತಿನ ಸಲುಗೆಯಿತ್ತೆ ಹೊರತು ಮುಖ ಪರಿಚಯವಿರಲಿಲ್ಲ.
ಪ್ರಕಾಶ್ ಒಂದು ತಿಂಗಳ ನಂತರ ತಂಗಿಗಾಗಿ ಸೆಲ್ ಫೋನ್ ತೆಗೆದುಕೊಂಡು ಸೀದಾ ಹಾಸ್ಟೆಲಿಗೆ ಬಂದಿದ್ದನು.
ವಾರ್ಡನ್ ಪರ್ಮಿಷನ್ ನೊಂದಿಗೆ ಸ್ಮಿತಾ ಸೌಮ್ಯ ಹಾಗೂ ಪ್ರಕಾಶ್ ಹತ್ತಿರದಲ್ಲೇ ಇದ್ದ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಐಸ್ ಕ್ರೀಮ್ ತಿಂದು ಪೇಟೆ ಸುತ್ತಿ ಹರಟೆ ಹೊಡೆದು ಹಾಸ್ಟಲ್ ಗೆ ಮರಳಿದರು.
ಸ್ಮಿತಾ ಅದೆಷ್ಟು ಹುಡುಗರ ನಿದ್ದೆ ಕದ್ದಿದ್ದರೂ ಪ್ರೀತಿಯಂತ ಆಗಿದ್ದು ಪ್ರಕಾಶನ ಮೇಲೆ ಮಾತ್ರ. ಅವನು ಅವಳ ಮೊದಲ ಕ್ರಶ್. ನಿದ್ದೆಯಲ್ಲು ಅವನ ಮುದ್ದು ಮುಖ ಅವಳ ಮನ ತುಂಬಿತ್ತು.
ಅದೊಂದು ದಿನ ಧೈರ್ಯ ಮಾಡಿಕೊಂಡು ಸ್ಮಿತಾ ಪ್ರಕಾಶ್ ಗೆ ಮೆಸೇಜ್ ಮಾಡಿದಳು.
ಅವರಿಬ್ಬರ ಹಾಯ್.. ವಿನಿಮಯದ ನಂತರ  ಐ ಲವ್ ಯು  ಪ್ರಕಾಶ್ ಎಂಬ ಮೆಸೇಜನ್ನು ಸ್ಮಿತಾ ಸೆಂಡ್ ಮಾಡಿದಳು.
ಪ್ರಕಾಶ್ ನಿಂದ ಯಾವುದೇ ಉತ್ತರವಿರಲಿಲ್ಲ.
ಎರಡು ದಿನಗಳ ನಂತರ ಸ್ಮಿತಾ ಧೈರ್ಯದಿಂದ ತಾನಾಗಿಯೇ ಕಾಲ್ ಮಾಡಿದಳು. ಪ್ರಕಾಶ್ ಯಾಕೋ ಅಂಜುತ್ತ ಮಾತಾಡುವಂತಿತ್ತು.
"ಸ್ಮಿತಾ ರಿಯಲ್ಲಾಗಿ ಹೇಳುತ್ತಿದ್ದೀಯ ಟೈಂಪಾಸ್ ಅಲ್ಲ ತಾನೇ"
"ಪ್ರೀತಿಯಲ್ಲಿ ರಿಯಲ್ ..ಟೈಮ್ ಪಾಸ್ ಅಂತ ಇದಿಯಾ?"
ಇಷ್ಟೇ ಸಾಕಿತ್ತು ಪ್ರಕಾಶ್ ಮುಗ್ಗರಿಸಲು..
ಗಂಟೆಗಟ್ಟಲೆ ಅವರಿಬ್ಬರ ನಡುವೆ ಫೋನ್ ಸಂಭಾಷಣೆ ನಡೆಯುತ್ತಿತ್ತು .ಏನು ಮಾತನಾಡುತ್ತಿದ್ದೇವೆ ಅಂತ ಅವರಿಗೆ ನೆನಪಿರಲಿಲ್ಲ.
ಒಂದು ಸಾರಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5:00 ಗಂಟೆ ತನಕ ಮಾತನಾಡಿ ರೆಕಾರ್ಡ್ ಸೃಷ್ಟಿಸಿದ್ದರು.
ಪ್ರಕಾಶ್ ಊರಿಗೆ ಬಂದಾಗ ಒಂದೆರಡು ಬಾರಿ ಸ್ಮಿತಾಳನ್ನು ಭೇಟಿಯಾಗಿದ್ದನು. ಸ್ಮಿತಾಳನ್ನು ಯಾವಾಗಲೂ ಎಸ್ಪಿ ಅಂತಾನೇ ಕರೆಯುತ್ತಿದ್ದ. 
ಸ್ಮಿತಾಪ್ರಕಾಶ್
ಅವನು ಅವಳ ಹೆಸರಿಗೆ ಅವನ ಹೆಸರನ್ನು ಸೇರಿಸಿ ಬಿಟ್ಟಿದ್ದ.
ಅವನು ಅವಳ ಹೆಸರಲ್ಲಿ ಆಶಾ ಮಹಲನ್ನೇ ಕಟ್ಟಿಸಿದ್ದ, ಹುಟ್ಟಲಿರುವ ಮಗುವಿಗೂ ಹೆಸರು ಇಟ್ಟಿದ್ದ.
ಬರುಬರುತ್ತಾ ಪ್ರಕಾಶನ ಬೇಡಿಕೆ ಹೆಚ್ಚುತ್ತಿತ್ತು.ಭೇಟಿಯಾಗೋಣ ಎನ್ನುತ್ತಿದ್ದ ಅವನ ಮಾತು ಅವಳಿಗೆ ಯಾಕೋ ಇತ್ತೀಚಿಗೆ ಕಿರಿಕಿರಿ ತರುತ್ತಿತ್ತು.
ಯಾರಾದರೂ ನಮ್ಮನ್ನು ನೋಡುವರು ಎನ್ನುವ ಭಯ ಅವಳಲ್ಲಿ ಮನೆಮಾಡಿತ್ತು. ಅವನ ಅತಿಯಾದ ಪ್ರೀತಿ ಅವಳಿಂದ ಸಹಿಸಿಕೊಳ್ಳಲಾಗುತ್ತಿರಲಿಲ್ಲ.
ಇತ್ತೀಚಿಗೆ ಎಕ್ಸಾಮ್ ಎಂಬ ನೆಪವೊಡ್ಡಿ ಅವನ ಫೋನ್ ರಿಸೀವ್ ಮಾಡೋದು ಕಮ್ಮಿ ಮಾಡಿದಳು.
ಒಂದಿನ ಪ್ರಕಾಶ್ ಸೌಮ್ಯಳಿಗೆ ಕಾಲ್ ಮಾಡಿ ಸ್ಮಿತಾ ಹೇಗಿದ್ದಾಳೆ ಎಂದಾಗ ಅವಳು ಬಾಯ್ ಫ್ರೆಂಡ್ ಜೊತೆ ಫಿಲಂಗೆ ಹೋಗಿದ್ದಾಳೆ ಎಂಬ ಮಾತು ಕೇಳಿ ಸಿಡಿಲು ಬಡಿದಂತಾಯ್ತು.
ಪ್ರಕಾಶ್ ಅದೆಷ್ಟು ಬಾರಿ ಕಾಲ್ ಮಾಡಿದರೂ ರಿಂಗಾಗುತ್ತಿತ್ತು ಫೋನ್ ಕೊನೆಗೊಮ್ಮೆ ಸ್ವಿಚ್ ಆಫ್ ಎನ್ನುವ ವಾಣಿಯೊಂದಿಗೆ ನಿಷ್ಕ್ರಿಯೆ ಗೊಂಡಿತ್ತು.
ಮೊಬೈಲ್ ಚಾರ್ಜಿಗಿಟ್ಟ ಸ್ಮಿತಾ ನೂರರ ಗಡಿದಾಟಿದ ಮಿಸ್ ಕಾಲ್ ನೋಡಿ ಹೌಹಾರಿದಳು ಮತ್ತೆ ಕಾಲ್ ಮಾಡಿದರೆ ಪ್ರಕಾಶನ ಮೊಬೈಲ್ ಸ್ವಿಚ್ ಆಫ್.
ಅಸಹ್ಯ ಭಾವದಿಂದ ಬೇಸತ್ತ ಪ್ರಕಾಶ್ ಸಿಟ್ಟಿನಿಂದ ಮೊಬೈಲ್ ಎಸೆದಿದ್ದ ನಾಲ್ಕು ಫ್ಲೋರ್ ನಿಂದ ಕೆಳಗುರುಳಿದ ಮೊಬೈಲ್ ಅದ್ಯಾವ ಮೋರಿಯಾ ಚರಂಡಿಯಲ್ಲಿ ಬಿದ್ದಿತೋ ತಿಳಿಯದಾದನು.
ಆ ದಿನ ಅವನಿಗೆ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ ತನ್ನ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ಬಿಕ್ಕಿಬಿಕ್ಕಿ ಅಳುತ್ತಿದ್ದ.
ಉಕ್ಕಿ ಹರಿಯುತ್ತಿದ್ದ ಕಣ್ಣೀರನ್ನು ಅವನ ಕೈಬೆರಳುಗಳು ತಡೆಯದಾದವು.ಸಮಾಧಾನ ಮಾಡಲು ಅಲ್ಲಿ ಯಾರು ಇಲ್ಲ ಧ್ವನಿಯೇರಿಸಿ ಅಳತೊಡಗಿದನು.
ಒಂದೆರಡು ದಿನಗಳ ನಂತರ ಡೂಪ್ಲಿಕೇಟ್ ಸಿಮ್ ನೊಂದಿಗೆ ಹೊಸ ಫೋನ್ ತಂದಿದ್ದನು.
ಸಿಮ್ ಆಕ್ಟಿವೇಟ್ ಆಗುತ್ತಿದ್ದಂತೆ ಒಂದರಮೇಲೊಂದು ಕರೆಗಳು.ಈಗ ಅವನಿಗೆ ಮನದಟ್ಟಾಯಿತು ನಾನೇನು ಒಂಟಿಯಲ್ಲ ಎಷ್ಟೊಂದು ಜನ ನನಗಾಗಿ ಇರುವವರು..
ಈಗ ಸ್ಮಿತಾಳ ಸಹ ಕಾಲ್ ಮಾಡಿದ್ದಳು ಅವನಿಚ್ಛೆಯಂತೆ ಭೇಟಿಯಾಗಲು ಸಮ್ಮತಿ ಸೂಚಿಸಿದ್ದಳು.
ಅಂದು ಮಂಗಳವಾರ ವಾದುದರಿಂದ ಪಾರ್ಕ್ನಲ್ಲಿ ಯಾರು ಇರಲಿಲ್ಲ.ಸ್ಮಿತಾಳೆ ಮಾತನಾಡಿ ಮೌನಕ್ಕೆ ಕತ್ತರಿ ಹಾಕಿದಳು.
"ಪ್ರಕಾಶ್ ಫೋನ್ ರಿಸೀವ್ ಮಾಡದ್ದಕ್ಕೆ ಸ್ವಾರಿ ಕೇಳಿ ಆಯ್ತಲ್ಲ"
"ಅದಲ್ಲ"
"ಮತ್ತೆ"
"ಫಿಲ್ಮಿ ಗೆ ಹೋಗಿದ್ದೀಯಾ"
"ಹೌದು"
"ಯಾರ ಜೊತೆ"
"ಫ್ರೆಂಡ್ಸ್ ಜೊತೆ"
"ಅಂದ್ರೆ"
"ಅಯ್ಯಾ ನನ್ನ ಕ್ಲಾಸ್ಮೇಟ್ ಹುಡುಗರು ಹುಡುಗಿಯರು ಜೊತೆಯಲ್ಲಿ ಹೋಗಿದ್ದೇವೆ "
"ಈ ಮಂತು ಕೋರ್ಸ್ ಮುಗಿಯಿತಲ್ಲ.. ಬಹಳ ಒತ್ತಾಯ ಮಾಡಿದರು"
ಪ್ರಕಾಶ್ ಸುಮ್ಮನಾದ ..ನಾನೇಕೆ ಇಷ್ಟು ಹಾಳಾದಯೋಚನೆ ಮಾಡಿ ಮನಸ್ಸು ಕೆಡಿಸಿಕೊಂಡೆ...  ತನ್ನ ಬುದ್ದಿನ ತಾನೆ ಹಳೆಯ ತೊಡಗಿದನು.
ಈಗ ಮನಸ್ಸು ಕೊಂಚ ನಿರ್ಮಲವಾಯಿತು. ಮೊಗ್ಗಾಗಿದ್ದ ಪ್ರೀತಿ ಹೂವಾಗಿ ಅರಳಿತು.
ಪ್ರಕಾಶನ ಮೊಗದಲ್ಲಿ ಮೂಡಿದ ಮಂದಸ್ಮಿತಕ್ಕೆ ಸ್ಮಿತಾ ಭಾವನೆಯಾದಳು.
ಕೈಯಲ್ಲಿ ಕರ್ಪೂರ ಹೊತ್ತಿಸಿ ದೇವರ ಮುಂದೆ ನಾನೆಂದು ನಿನ್ನವಳು ಎಂಬ ಪ್ರತಿಜ್ಞೆ ಮಾಡಿದಳು.
ಕಾಲೇಜು ಮುಗಿಸಿ ಹಾಸ್ಟೆಲಿನಿಂದ ಮನೆಗೆ ನಡೆದ ಸ್ಮಿತಾಳಿಗೆ ಅಚ್ಚರಿ ಕಾದಿತ್ತು. ತಂದೆ ಅದಾಗಲೇ ಎರಡು ಕಡೆ ಹುಡುಗನ ನೋಡಿ ಮದುವೆಯಾ ಸಿದ್ಧತೆಯಲ್ಲಿದ್ದರು.
ವಿಷಯ ತಿಳಿದ ಪ್ರಕಾಶ್ ಹೌಹಾರಿದ್ದ. ನೇರವಾಗಿ ಕೇಳಲು ಧೈರ್ಯ ಸಾಲದೆ ..
"ಮೊದಲು ಸೌಮ್ಯಳ ಮದುವೆ ನಡೆಯಲಿ ನಂತರ ನಮ್ಮ ಮದುವೆ ಪ್ಲೀಸ್ ಎಸ್.ಪಿ..ಹೇಗಾದರೂ ಅಪ್ಪನ ಒಪ್ಪಿಸು" ಎಂದಿದ್ದ.
ಅದಾಗಲೇ ಸ್ಮಿತಾನ ಹಳೆಯ ಗೆಳೆಯರು ಒಂದಷ್ಟು ವದಂತಿ ಹಬ್ಬಿಸಿದರು.ಅವಳ ಬಗ್ಗೆ ಅಸಹ್ಯವಾಗಿ ಮಾತನಾಡಿಕೊಂಡಿದ್ದರು.
ಒಂದೆರಡು ಫೇಸ್ಬುಕ ಕಾಮೆಂಟಗಳನ್ನು  ಪ್ರಕಾಶ್ ಸಹ ನೋಡಿದ್ದನು.ಅದಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸ್ಮಿತಾಗೆ ನಿರ್ಬಂಧ ವಿಧಿಸಿದನು.
ತಂದೆಗೂ ಮಗಳದ್ದೇ ಚಿಂತೆ ಒಬ್ಬಳನ್ನೇ ಎಂದು ಹೊರಗೆ ಬಿಡುತ್ತಿರಲಿಲ್ಲ.
ಮೊಬೈಲ್ ಜಾಸ್ತಿ ಉಪಯೋಗಿಸುವಂತಿಲ್ಲ ಹೀಗೆ ಸ್ಮಿತಾ ಒಂದೊಂದೇ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಳು.
ಒಂದೆರಡು ಬಾರಿ ಎಂಗೇಜ್ ಬರುತ್ತಿದ್ದ ಕಾರಣ ಸ್ಮಿತಾಗೆ ಪ್ರಕಾಶ್ ಪದೇಪದೇ ಕಾಲ್ ಮಾಡುತ್ತಿದ್ದ. ಹೀಗೆ ಅನುಮಾನಿಸುತ್ತಿದ್ದ ಪ್ರಕಾಶನನ್ ಕಂಡಾಗ ಇವನು ನನ್ನವನೇ ಎನಿಸುತ್ತಿತ್ತು.
ಪ್ರಕಾಶ್ ಏನು ಕೆಟ್ಟವನಲ್ಲ ಆದರೆ ತುಂಬಾ ಪೊಸೆಸಿವ್ನೆಸ್.
ನಾನು ಅವಳನ್ನು ಪ್ರೀತಿಸುತ್ತಿದ್ದೇನೆ. ಅವಳು ನನ್ನನ್ನು ಅಷ್ಟೇ ಪ್ರೀತಿಸಬೇಕು. ಅವಳು ನನ್ನವಳು.ನನ್ನ ಬಿಟ್ಟು ಯಾರು ಅವಳನ್ನು ನೋಡಕೂಡದು. ಅವಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಹೀಗೆ ಯೋಚಿಸುತ್ತಿದ್ದನು.
ಈಗ ಸ್ಮಿತಾ ಯೋಚಿಸತೊಡಗಿದಳು.
ಪ್ರೀತಿ ಎಂದರೆ ಏನು?
ಅದು ಮೊದಮೊದಲು ಕೊಡುತ್ತಿದ್ದ ಖುಷಿ ಈಗೇಕೆ ಕೊಡುತ್ತಿಲ್ಲ?
ನನ್ನ ಆಯ್ಕೆ ತಪ್ಪೇ?
ನನ್ನೆಲ್ಲ ಆಸೆ-ಆಕಾಂಕ್ಷೆಗಳನ್ನು ಸ್ವಾತಂತ್ರ್ಯವನ್ನು ಕಳೆದುಕೊಂಡು ಬೇರೆಯವರಿಗಾಗಿ ಬದುಕುವುದು ಪ್ರೀತಿನಾ?
ಯಾವ ಖುಷಿಗಾಗಿ ಪ್ರಕಾಶನನ್ನು ಪ್ರೀತಿಸಿದೆ ಹೀಗೆ ಅರ್ಥವಿಲ್ಲದ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು ಅವಳ ಮನಸ್ಸಿನ ಪಟಲದಲ್ಲಿ ಹಾದು ಹೋಗುತ್ತಿತ್ತು.
ಒಂದೇ ಸವನೆ ಮದುವೆಯಾಗು ಎಂಬ ತಂದೆಯ ಒತ್ತಡ ಅವಳ ಮನಸ್ಸನ್ನು ಇನ್ನಷ್ಟು ಜರ್ಜರಿತ ಗೊಳಿಸಿದ್ದು.
ಸ್ಮಿತಾಳಿಗೆ ದಿಕ್ಕೇ ತೋಚದಂತಾಯಿತು.
ಒಂದು ಸಂಜೆ ಯಾರಿಗೂ ಹೇಳದೆ ಮನೆ ಬಿಟ್ಟು ಬೆಂಗಳೂರಿಗೆ ಬಂದಳು.
ಪ್ರಕಾಶ್ ಅವಳಿಗೆ ಸಮಾಧಾನ ಮಾಡಿ ತಂದೆ ಜೊತೆ ಮಾತನಾಡುವುದಾಗಿ ತಿಳಿಸಿದನು.
ಪ್ರಕಾಶ್ ರಾತ್ರಿಯಿಡಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದ. ಮರುದಿನ ಆಫೀಸಿಗೆ ರಿಸೈನ್ ಲೆಟರ್ ಹಾಕಿ ಪ್ರಕಾಶ ಅವಳ ಜೊತೆ ಊರಿಗೆ ಹೊರಟನು.
ಮನೆಯಲ್ಲಿ ಗೊಂದಲವೇ ಸೃಷ್ಟಿಯಾಗಿತ್ತು ಮನೆ ಬಿಟ್ಟು ಓಡಿ ಹೋದ ಮಗಳಿಂದ ಅವಮಾನವಾಗಿ ಮೋಹನ್ ಪಾಲಿಡಾರ್ ತೆಗೆದುಕೊಂಡಿದ್ದರು.
ಸ್ಮಿತಾ ಆವೇಶಭರಿತಳಾಗಿ ವೆಂಟಿಲೇಟರ್ ನಲ್ಲಿದ್ದ ತಂದೆಯ ಕಡೆಯ ಓಡಿದಳು. ಪ್ರಕಾಶ್ ಇದೆಲ್ಲಕ್ಕೂ ತಾನೇ ಕಾರಣ ಎಂಬಂತೆ ಹಿಂದೆಸರಿದನು.
ತಿಂಗಳುಗಳೇ ಬೇಕಾಯಿತು ಮೋಹನ್ ಸರಿಯಾಗಲು ಇದೀಗ ತಂದೆಯ ಪ್ರತಿ ಮಾತಿಗೂ ಹೂ ಗುಟ್ಟುತ್ತಿದ್ದಳು. ಮಮತೆಯ ಮಡಿಲಲ್ಲಿ ಪ್ರೀತಿ ಕುರುಡಾಗಿತ್ತು.
ಸ್ಮಿತಾ ತಂದೆಯ ಮಾತಿನಂತೆ ಪ್ರಮೋದ್ ನನ್ನು ವರಿಸಲು ಸಿದ್ದಳಾಗಿದ್ದಳು.
ಪ್ರಕಾಶನ ಮನವೊಲಿಕೆಯ ಮಾತಿಗೆ ಅವಳು ಕರಗದಾದಳು.ಸಾಲದಕ್ಕೆ ನಾ ನಿನ್ನ ಪ್ರೀತಿಸಲೇ ಇಲ್ಲ ಎಂದು ಬಿಟ್ಟಳು.
"ನೀನೇ ಹೇಳೊ ಹಾಗೆ. ಅದೆಷ್ಟು ಹುಡುಗರ ಹಾಗೆ ನೀನು ನನಗೆ ಟೈಂಪಾಸ್"
ಅದೊಂದೇ ನುಡಿ ಸಾಕಿತ್ತು ಅವನ ಜೀವನದಲ್ಲಿ ಮುಂದುವರೆಯಲು.
ಈಗ ಎಲ್ಲವೂ ಇದೆ ಅವಳನ್ನು ಬಿಟ್ಟು.
ನಾನೆಲ್ಲಿ ಎಡವಿದೆ ಅವಳನ್ನು ಪಡೆದುಕೊಳ್ಳುವಲ್ಲಿ?
ಪ್ರತಿ ವ್ಯಕ್ತಿಯ ಜೀವನದಲ್ಲಿ ಮೊದಲ ಪ್ರೇಮ ಕಥೆ ದುಃಖಾಂತ್ಯ ವಾಗುವುದೇಕೆ?
ಅನುಭವಗಳ ಕೊರತೆಯೇ?
ಹಾಗಿದ್ದರೆ ಅನುಭವ ಪಡೆದು ಪ್ರೀತಿಸಲು ಅದೇನು ಆಟವೇ?
ಅದೇನೇ ಇರಲಿ ಅವಳು ಸಂಪೂರ್ಣ ಈಗ ನನ್ನನ್ನು ಮರೆತುಬಿಟ್ಟಿದ್ದಾಳೆ.ತನ್ನದೇ ಆದ ಜೀವನ ಕಟ್ಟಿಕೊಂಡು ಹಾಯಾಗಿದ್ದಾಳೆ.
ನಾನು ಪ್ರೇಮಿಯನ್ನು ಕಳೆದುಕೊಂಡಿರಬಹುದು ಆದರೆ ಪ್ರೀತಿಯನ್ನಲ್ಲ.
ಅವಳು ನನ್ನನ್ನು ಬ್ಲಾಕ್ ಮಾಡಿರಬಹುದು ಆದರೆ ಪ್ರೀತಿಯ ಸೆಳೆತವನ್ನಲ್ಲ.
ಎಂದಿನಂತೆ ವಿಶ್ ಮಾಡಿ ಸಿಮ್ ಕಟ್ ಮಾಡಿ ಎಸೆದ ಪ್ರಕಾಶ್.
ಸ್ಮಿತಾ ಯಾವತ್ತು ಪ್ರಕಾಶ್ ನನ್ನ ಮರೆತಿರಲಿಲ್ಲ.ಎಂದಿನಂತೆ ಅವನನ್ನು ಬ್ಲಾಕ್ ಮಾಡಲು ಇಂದು ಅವಳ ಮನಸ್ಸು ಸಿದ್ಧವಿರಲಿಲ್ಲ.ಇಂದೇಕೋ ಅವನಿಗೆ ಕರೆ ಮಾಡಬೇಕೆನಿಸಿತು.ನಾನಿನ್ನು ನಿನ್ನ ಮರೆತಿಲ್ಲ ಹೇಗಿದ್ದೀಯಾ ಅಂತ ಕೇಳಬೇಕೆನಿಸಿತು.
ನಂಬರ್ ಸೇವ್ ಮಾಡಿಕೊಂಡವಳೆ  ಫೋನ್ ಮಾಡಲು ಕಾಲ್ ಬಟನ್ ಪ್ರೆಸ್ ಮಾಡಿದಳು.
ಸ್ಮಿತಾ ಏನ್ ಮಾಡ್ತಿದ್ದೀಯಾ ಪಾರ್ಟಿಗೆ ರೆಡಿಯಾಗು ಎಂದ ಕೂಗಿಗೆ ಎಂಡ್ ಬಟನ್ ಅದುಮಿದಳು.