ಮುಗ್ದ ವ್ಯಾಪಾರಿ
ಹೋದ ನನ್ನ ಮಾರಿ
ಪೆಚ್ಚು ಮೋರೆ ನೋಡದೆ
ಹುಚ್ಚು ಹಣದ ಆಸೆಗೆ
ಕೊಂಡು ಕೊಳ್ಳಲು ನೂರು ಸರದಾರರು
ಬರಿ ಸರಕು ನಾನು...
ಇವರ ಕೈಯಿಂದವರ ಕೈಗೆ ಸೇರಿ
ಹರಾಜಿನಲ್ಲೆ ಬಿಕಾರಿ..
ನೋಟಿನ ಮೌಲ್ಯಕೊಟ್ಟು
ಬೂಟಿನ ಕೆಳಗಿಟ್ಟು ತೂಗುವ
ಇವರಲ್ಲಿ ಕೇಳಬಹುದೆ
ಸ್ವಾತಂತ್ರ್ಯ ಸಮಾನತೆ
ದಪ್ಪ ಚರ್ಮದ
ಅಂದ ಕುರುಡರ ಹಿಂದೆ
ಹಿಂದು ಮುಂದು ನೋಡದೆ ನಡೆದಿದ್ದು
ನಂದು ತಪ್ಪೆ..
ಪ್ರತಿಭಟಿಸಲು ನಾನು ಒತ್ತೆಯಾಳು
ಯಾರು ಕೇಳರು ಕತ್ತೆ ಗೋಳು
ಕಂಡು ಕಾಣದೆ ನಟಿಸಿದವರಕ್ಕಿಂತ
ನಕ್ಕು ನಡೆದವರೇ ಸುಮಾರು ಪಾಲು
ಅಂದು ಕೈಯಲ್ಲಿ ಜೀವ ಹಿಡಿದು
ಓಟಕ್ಕಿಳಿದೆ,
ಹಿಂಬಾಲಿಸಲು ಬೆನ್ನು ಕಾಣುತ್ತಿತ್ತು.
ಹಾಳೂರು ಮೂಳೂರೆಂಬ ಯೋಚನೆಯಿರಲಿಲ್ಲ..
ಇಂದು ಸಹ ಕೈಯಲ್ಲಿ ಜೀವ ಹಿಡಿದಿರುವೆ
ಹಿಂದಿರುಗಿ ನೋಡಲು ಬೆನ್ನು ಕಾಣಿಸುತ್ತಿದೆ.
ಹಿಂಬಾಲಿಸುತ್ತಿದ್ದಾರೆ,
ಯಾವ ಊರೆಂಬ ಯೋಜನೆಯಿಲ್ಲ.
ಮುಂದೆ ದಾರಿ ಇಲ್ಲ.
ಈ ಜೀವಕ್ಕೆ ಮತ್ತೆ ನೋವೇಕೆ.
ಪವಾಡ ನಡೆಯಲಿಲ್ಲ ,ಅಖಾಡಕಿಳಿಯಲಿಲ್ಲ..
ಮಲೀನವಾಗುದಕ್ಕಿಂತ ವಿಲೀನವಾಗುವುದೇ ಅಂತ್ಯ
ಎರಡು ಹೆಜ್ಜೆಗೆ ಹರಿವ ತೊರೆ
ಕೊಚ್ಚಿ ಸಾಗಲಿ ಪಾಪದ ಹೊರೆ.
No comments:
Post a Comment