ಡಿಪ್ರೆಶನ್... ಮಾನಸಿಕ ಕೀಳರಿಮೆ
ಇಂದಿನ ಒತ್ತಡದ ಬದುಕಿನಲ್ಲಿ ಯಾವ ಕಾರ್ಯವನ್ನು ಸರಿಯಾಗಿ ನಿರ್ವಹಿಸಲಾಗದೆ ಬವಣೆ ಪಡುತ್ತಿರುವ ಜೀವಿ ಮನುಷ್ಯ. ಕಾಲದೊಂದಿಗೆ ತೀವ್ರ ಪೈಪೋಟಿಯ ಜೀವನ ಸಾಗಿಸುವ ಮನುಷ್ಯ ತನ್ನ ಕರ್ತವ್ಯದಲ್ಲಿ ಎಡವುತ್ತಿದ್ದಾನೆ.
ಅತ್ತ ವೃತ್ತಿ ಬದುಕಿನಲ್ಲಿ ಹಿಡಿದ ಕಾರ್ಯವು ಅಪೂರ್ಣ ಇತ್ತ ವೈಯಕ್ತಿಕ ಜೀವನದಲ್ಲೂ ನೆಮ್ಮದಿ ಇಲ್ಲ ಎಂಬಂತಾಗಿದೆ.
ಇದಕ್ಕೆಲ್ಲ ಮುಖ್ಯ ಕಾರಣ ದೈಹಿಕ ಹಾಗೂ ಮಾನಸಿಕ ಅನಾರೋಗ್ಯ. ದಿನೇ ದಿನೇ ಹೆಚ್ಚುತ್ತಿರುವ ಆತ್ಮಹತ್ಯಾ ಪ್ರಕರಣಗಳು ಇದಕ್ಕೆ ಪುಷ್ಟಿ ನೀಡುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 40 ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.
ಹೆಚ್ಚಿನ ಆತ್ಮಹತ್ಯಾ ಪ್ರಕರಣಗಳಿಗೆ ಕಾರಣವಾಗಿರುವುದು ಮಾನಸಿಕ ಅಸ್ವಸ್ಥತೆ,ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲಾಗದ ಮಾನಸಿಕ ತೊಳಲಾಟ.
ಸಾಮಾನ್ಯವಾಗಿ ಒಬ್ಬ ಮನುಷ್ಯನಲ್ಲಿ ಎರಡು ರೀತಿಯ ಭಾವನಾತ್ಮಕ ಮನಸ್ಸುಗಳು ಇರುತ್ತದೆ. ಇವುಗಳನ್ನು ಕ್ರಮವಾಗಿ ಸೂಕ್ಷ್ಮ ಹಾಗೂ ಸದೃಢ ಮನಸ್ಸು ಎನ್ನಬಹುದು.
ಈ ಸೂಕ್ಷ್ಮ ಮನಸ್ಸು ಹೊರ ಮನಸ್ಸಾಗಿದ್ದು ಒಳಮನಸ್ಸಿನ ಜೊತೆ ನಿರಂತರ ಸಂಪರ್ಕದಲ್ಲಿರುತ್ತದೆ.
ಸೂಕ್ಷ್ಮ ಹಾಗೂ ಸದೃಢ ಮನಸ್ಸುಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸವಾಲು ನಮ್ಮ ಮುಂದಿದೆ.
ಅನುಭವಗಳಿಂದ ಮನಸ್ಸು ಮಾಗುತ್ತದೆ, ಆದರೂ ಯೋಗ ಹಾಗೂ ಧ್ಯಾನಗಳಿಂದ ನಮ್ಮ ಮನಸ್ಸಿಗೆ ಬಲ ನೀಡಬಹುದು.
ಸಮಸ್ಯೆಗಳು ನೀಡುವ ನೋವು ಕಷ್ಟಗಳು ತಾತ್ಕಾಲಿಕವಾದುದು ಎಂಬ ಸತ್ಯವನ್ನು ಎಂದೂ ಮರೆಯಬಾರದು.
ಆರಂಭದಲ್ಲಿ ಸಮಸ್ಯೆಗಳು ಚಿಕ್ಕದಾಗಿರುತ್ತವೆ ಇವುಗಳನ್ನೇ ಬೆಟ್ಟದಂತೆ ಭ್ರಮಿಸುವುದು ನಮ್ಮ ಮನಸ್ಸು.
ಉದಾಹರಣೆಗೆ ನಮ್ಮ ಚಿಕ್ಕಂದಿನ ಘಟನೆಗಳನ್ನು ಮೆಲುಕು ಹಾಕೋಣ.
ಸ್ಕೂಲ್ ನಲ್ಲಿರುವಾಗ ಅದಾಗಲೇ ತಂದುಕೊಟ್ಟ ಹೊಸ ಪೆನ್ನು ಪುಸ್ತಕಗಳನ್ನು ಹಿಡಿದು ಸಂಭ್ರಮಿಸಿದ ನಮಗೆ ಅದೇ ಸಂಜೆ ತಮ್ಮ ವಸ್ತುಗಳನ್ನು ಕಳೆದುಕೊಂಡಾಗ ಎಷ್ಟೊಂದು ಭಯವಾಗಿತ್ತು, ಮನೆಗೆ ಹೇಗೆ ಹೋಗಲಿ? ಮನೆಗೆ ಹೋಗಲೋ..ಬೇಡವೋ.. ಕಾರಣ ಏನು ಹೇಳಲಿ? ಹೀಗೆ ಆ ಎಳೆ ಮನಸ್ಸು ಎಷ್ಟೊಂದು ತಳಮಳಗೊಂಡಿತ್ತು.
ಅದೆಲ್ಲ ಸವಾಲುಗಳನ್ನು ಎದುರಿಸಿ ಬಂದ ನಮಗೆ ಆ ಚಿಕ್ಕಂದಿನ ವಿಷಯ ಇಂದು ಬಾಲಿಶವಾಗಿ ನಗು ತರಿಸಿದಂತು ನಿಜ..
ಹೀಗೆ ಒಂದು ಕಾಲದಲ್ಲಿ ಎದುರಿಸಿದ ಸವಾಲುಗಳು ಇಂದು ಏನೂ ಅಲ್ಲ ಎನ್ನುವ ಮಟ್ಟಿಗೆ ನಿರ್ಧಾರ ಮಾಡಿದೆವೆಂದರೆ ನಮ್ಮ ಮನಸ್ಸು ಅಷ್ಟೊಂದು ಪ್ರಭುದ್ದವಾಗಿದೆ ಎಂದರ್ಥ.
ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳಿರುತ್ತವೆ ಅದನ್ನು ಅರಿವಿಗನುಗುಣವಾಗಿ ಕಂಡುಕೊಳ್ಳಬೇಕಾದ್ದು ನಮ್ಮ ಜವಬ್ದಾರಿ.
ಈ ಸೂಕ್ಷ್ಮ ಹಾಗೂ ಸದೃಢ ಮನಸ್ಸುಗಳು ಎಲ್ಲರಲ್ಲೂ ಒಂದೇ ತೆರನಾಗಿ ಇರಲು ಸಾಧ್ಯವಿಲ್ಲ.
ಸೂಕ್ಷ್ಮ ಮನಸ್ಸು ಸಡನ್ ಶಾಕ್ ಗೆ ಬೇಗ ಒಳಗಾಗುತ್ತದೆ.
ನಾವು ಕೇಳುವ ನೋಡುವ ಶುಭ ಹಾಗೂ ಅಶುಭ ಸನ್ನಿವೇಶಗಳು ಈ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ ಆ ವಿಷಯಗಳನ್ನು ಎಷ್ಟು ಹೊತ್ತು ನಮ್ಮ ಮನಸ್ಸಿನಲ್ಲಿ ಇಟ್ಟಿರುತ್ತೇವೆ ಎನ್ನುವುದು ಸದೃಢ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.
ಸೂಕ್ಷ್ಮ ಮನಸ್ಸಿನ ಪರಿಮಿತಿಯಿಂದ ಕೋಪ ಉದ್ವೇಗ ಹಾಗೂ ಹೃದಯಾಘಾತಗಳು ಸಂಭವಿಸಬಹುದು.
ಆನಂದ,ನಗು,ಕಣ್ಣಿರು ಹಾಗೂ ರೋಮಾಂಚನ ಇವೆಲ್ಲ ಸೂಕ್ಷ್ಮ ಮನಸ್ಸಿನ ಸಂವೇದನೆಗಳು.
ಅಲ್ಪ ಸಮಯದಲ್ಲಿಯೇ ಘಟಿಸುವ ಘಟನೆಗಳಾದುದರಿಂದ ಇವುಗಳನ್ನು ತಡೆಯುವುದು ಸ್ವಲ್ಪ ಕಷ್ಟ..
ಸೂಕ್ಷ್ಮ ಮನಸ್ಸಿನ ಗುಣಗಳು ವಂಶಪಾರಂಪರಿಕವಾಗಿ ಬಂದಿರಲೂಬಹುದು ಆದರೆ ಸದೃಢ ಮನಸ್ಸಿನ ಕಲ್ಪನೆಯನ್ನು ನಾವೇ ರೂಪಿಸಿಕೊಳ್ಳಬೇಕು.
ಮೊದಲೇ ಹೇಳಿದಂತೆ ಸದೃಢ ಮನಸ್ಸೆಂದರೆ ಸೂಕ್ಷ್ಮ ಸಂವೇದನೆಯ ಒಳಹರಿವು.ಇಲ್ಲಿ ಪ್ರಸ್ತತ ವಿಷಯವನ್ನು ಎಷ್ಟು ಹೊತ್ತು ಬಂಧಿಸಿಟ್ಟು,ಅದರಿಂದ ಹೊರಬರುತ್ತೇವೆ ಎನ್ನುವುದು ಮುಖ್ಯ. ಸಮಸ್ಯೆಗಳಿಂದ ಹೊರಬರಲು ತೆಗೆದುಕೊಳ್ಳುವ ಕಾಲ ಕನಿಷ್ಠವಾದಷ್ಟು ನಾವು ಸದೃಢರು.
ಸದೃಢ ಮನಸ್ಸಿನ ಗೊಂದಲದಂದ ಖಿನ್ನತೆ, ಶಾಶ್ವತವಾದ ಮರೆಯು,ಮಾನಸಿಕ ಅಸ್ವಸ್ಥತೆ ಹಾಗೂ ಆತ್ಮಹತ್ಯೆಗಳಂತ ಪ್ರಕರಣಗಳಿಗೆ ಕಾರಣವಾಗಬಹುದು.
ನಾವು ಕೆಲವು ವ್ಯಕ್ತಿಗಳನ್ನು ಕಲ್ಲು ಮನಸ್ಸಿನವರು,ಭಾವನಗಳೆ ಇಲ್ಲದವರೆಂದು ಆಡಿಕೊಂಡಿದ್ದುಂಟು. ಇಂತಹ ವ್ಯಕ್ತಿಗಳ ಸದೃಢ ಮನಸ್ಸು ಪಕ್ವಗೊಂಡಿರುತ್ತದೆ.
ಸದೃಢ ಮನಸ್ಸನ್ನು ಗಟ್ಟಿಗೊಳಿಸುವುದು ಹೇಗೆ..?
ಇಲ್ಲಿ ಮುಖ್ಯವಾಗಿ ಬೇಕಿರುವುದು ತಾಳ್ಮೆ ಹಾಗೂ ಸಹನೆ.
ನಮ್ಮ ಮೇಲೆ ನಮಗಿರುವ ನಂಬಿಕೆ, ವಿಷಯಗಳನ್ನು ಅವಲೋಕಿಸುವ ಗುಣ ಹಾಗೂ ತಿಳುವಳಿಕೆಗಳು.
ಶಿಕ್ಷಣ ವ್ಯವಸ್ಥೆಯು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವದರೊಂದಿಗೆ ವಿಷಯಗಳ ಅವಲೋಕನಕ್ಕೆ ದಾರಿ ಮಾಡಿಕೊಡುತ್ತದೆ.
ನಾವು ಮೊದಲು ಸಮಸ್ಯೆಗಳನ್ನು ದುರ್ಬಲಗೊಳಿಸಬೇಕು ಅಂದರೆ ಸಮಸ್ಯೆಗಳನ್ನು ದೂರದಿಂದ ಸ್ವೀಕರಿಸುವ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು.ಅವುಗಳನ್ನು ಮಿತ್ರರ ಸಂಬಂಧಿಕರ ಸಮಸ್ಯೆಗಳನ್ನಾಗಿ ಪರಿಗಣಿಸಿ ಏನೇನು ಸಲಹೆ ನೀಡಬಹುದು ಎಂದು ನಿರ್ಧರಿಸಬೇಕು.
ಹೀಗೆ ಮಾಡುವುದರಿಂದ ಮೈಂಡ್ ಬ್ಲಾಕಿಂಗ್ ಸಾಧ್ಯತೆ ಕಮ್ಮಿಯಾಗುತ್ತದೆ.
ಜೀವನದಲ್ಲಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಲು ಮನಸ್ಸನ್ನು ಹದಗೊಳಿಸಬೇಕು.ಈ ಪ್ರಕ್ರಿಯೆ ನಿರಂತರವಾದುದ್ದು ದಿನದ 10 ಅಥವಾ 15 ನಿಮಿಷ ಯೋಗ ಅಥವಾ ಧ್ಯಾನಕ್ಕೆ ಮೀಸಲಿಡುವುದು ಉತ್ತಮ.
ಕೆಲವೊಂದು ಋಣಾತ್ಮಕ ವ್ಯಸನಗಳಾದ ಮದ್ಯಪಾನ, ಡ್ರಗ್ಸ್,ತಂಬಾಕು ಸೇವನೆಗಳಿಂದ ದೂರವಿರಬೇಕು.
ಭಾವನಾತ್ಮಕ ಸಂಬಂದ ಬೆಸೆಯುವ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಉತ್ತಮ.
ಉದಾಹರಣೆಗೆ ಬರವಣಿಗೆ ,ಮನರಂಜನಾ ಕಾರ್ಯಕ್ರಗಳು, ತೋಟಗಾರಿಕೆ ಇತ್ಯಾದಿ.
ಆತ್ಮವಂಚಕರಾಗದೆ ಆತ್ಮಸ್ಥೈರ್ಯದ ಜೊತೆಗೆ ಮನೋಸ್ಥೈರ್ಯವನ್ನು ಬೆಳೆಸಿಕೊಂಡು ಸ್ವಸ್ಥ ಸಮಾಜದ ನಿರ್ಮಾಣ ಮಾಡುವ.
No comments:
Post a Comment