Tuesday, 19 March 2024

ಜಗ ಮರೆಸೋ ಹೊತ್ತಿಗೆ

 

ಈ ನಿನ್ನ ಪ್ರೀತಿಗೆ ಜಗವೇ ಮರೆಯವಾಗ ನೋವು ಮರೆಯಾಗದಿರುವುದೆ...?

ನನಗೂ ಹಾಗೂ ನನ್ನ ಪುಸ್ತಕಕ್ಕೂ ಬಹಳ ನಂಟಿತ್ತು..ಎರಡೆರಡು ಪೇಜು ಜೊತೆಗೇ ಅಂಟಿತ್ತು.
ತಿಂಡಿಯಿಂದ ಹಿಡಿದು ಊಟದ ಕೊನೆಗೂ ಎಡಗೈಯಲ್ಲೆ ಇತ್ತು.
ನಾನು ತಿನ್ನುವುದರೊಂದಿಗೆ ಪುಸ್ತಕಕ್ಕೂ ತಿನಿಸಿದ್ದುಂಟು..ಹಾಗಾಗಿ ಕಪ್ಪು ಬಿಳುಪಿನ ಪಠ್ಯದಲ್ಲಿ ಅಲ್ಲಲ್ಲಿ ಬಣ್ಣದ ಹಾವಳಿಯಿತ್ತು.
ಮತ್ತೆ ಮತ್ತೆ ಘಮ್ಮೆಂದು ನನ್ನ ಓದಲು ಕರೆದಿತ್ತು.
ಕಾರ್ ಶೇವ್ ಮಿಕ್ಸರಿಗೂ‌ ತನ್ನನ್ನೇ ತ್ಯಾಗಮಾಡಿತ್ತು.

ಅಂದಿನಂತೆ ಇಂದು ಕೂಡ ನನ್ನ ತೊಡೆಯ ಮೇಲೆ ಅದರ ಸ್ಥಾನವಿದ್ದರೂ ಅವಕಾಶ ಸಿಕ್ಕಾಗೆಲ್ಲ ಎದೆಯೇರಿ ಕುಳಿತುಕೊಳ್ಳುತ್ತಿತ್ತು.
ನಿದ್ದೆಯ ಮಂಪರು ಏರುತ್ತಿದ್ದರೂ ಮತ್ತೆ ನಕ್ರ ಮಾಡಿ ಇನ್ನೇನೊ ಯೋಚಿಸುವಂತೆ ಮಾಡುತ್ತಿತ್ತು.
ನಂಟು ಕಳೆದುಕೊಂಡು ಒಂಟಿಯಾದಗೆಲ್ಲ ಎರಡೂ ಕೈಗಳಿಂದ ಅಪ್ಪಿಕೊಳ್ಳುತ್ತೇನೆ..ಕೊನೆಯ ಪುಟ ಓದಿದ ಮೇಲೆ ಒಂದಿಷ್ಟು ಸಾಂತ್ವಾನ ನಾನೆ ಹೇಳುತ್ತೇನೆ.

ಒಂದಷ್ಟು ದಿನಗಳ ಹಿಂದೆ ಮೊಬೈಲ್ ಕೈಗೆ ಬಂದಾಗಿಂದ ಆಪ್ಲಿಕೇಶನ್ ಅಡಿಯಲ್ಲಿ ಇಣುಕುತಿದ್ದಾನೆ.ನಾನು ತಡಕಾಡುತ್ತಿದ್ದೇನೆ ಸಮಯ ಸಾಕಾಗದೆ ಅವನ ಅಪ್ಲಿಕೇಶನ್ ಸಿಗದೆ..

ಜ್ಞಾನ ಭಂಡಾರ ಬಿರುದಾಂಕಿತನು ಒಮ್ಮೊಮ್ಮೆ ಪುಸ್ತಕದ ಬದನೆಕಾಯಿ ಅನ್ನೊ ತೆಗಳಿಕೆಗೂ ಪಾತ್ರವಾದವನು
ಬೇರೆಯವರ ಹಣೆಬರಹ ಬದಲಾಯಿಸಲು ಬಂದು
ಪಾಪ‌ ಅದೆಷ್ಟು ಜನರಿಗೆ ತಲೆದಿಂಬಾಗಿ..ತನ್ನ ಹಣೆಬರಹ ಬರೆದ ಕರ್ತೃವಿನ ಮೇಲೆ ಕೋಪಕೊಂಡು ತನ್ನೊಳಗೆ ತಾನು ಅತ್ತಿದ್ದ ಕಹಿ ನೆನಪನ್ನು ನನಗೂ ಉಸುರಿದ್ದ..

ಹೌದು ಅವನೊಡನೆಯ ಸಂಬಂಧ ಇಂದು ನಿನ್ನೆಯದಲ್ಲ..ಹಲವಾರು ವರ್ಷಗಳಾದ್ದು..ಅಂದು ನಿನ್ನ ಜಾತಿ ,ಧರ್ಮ, ನೀತಿ ಇದ್ಯಾವುದ ಕೇಳದೆ ಮೆಚ್ಚಿಕೊಂಡಿದ್ದೆ,ಜಾಸ್ತಿ ಹಚ್ಚಿಕೊಂಡಿದ್ದೆ.

ಅಂಗಳದಲ್ಲಿ, ತಂಗಾಳಿಯಲ್ಲಿ ,ಬೆಳದಿಂಗಳಲ್ಲಿ,‌ ಮರದ ಕೊಂಬೆಗಳಲ್ಲಿ ಕುಳಿತು ನಿನ್ನ ಓದಿದ ನೆನಪು..
ಆ ಕತ್ತಲ ರಾತ್ರಿಯಲ್ಲಿ ಕಪ್ಪ ಹಲಿಗೆಯ ಮೇಲೆ ಸೀಮೆಯೆಣ್ಣೆ ಬೆಳಕಲ್ಲಿ ಸೀಮೆ ಸುಣ್ಣದಲ್ಲಿ ನಿನ್ನ ಅಕ್ಕರೆಯ ಅಕ್ಷರವ ತಿದ್ದಿದ ನೆನಪು..

ಪ್ರತಿ ವರ್ಷ ಉದ್ದ ಕ್ಯಾಲೆಂಡರ್ ಹರಿದು ನಿನಗೊಂದು ಅಂಗಿ ತೊಡಿಸಿ,ಲೇಬಲ್ ಹಚ್ಚಿ  ಹೆಸರಿಟ್ಟ ನೆನಪು..
ಗೋಣಿಚೀಲದಲ್ಲಿ ಮೂಟೆಕಟ್ಟಿ ಬೆನ್ನ ಮೇಲೆ ಹೊತ್ತ ನೆನಪು. ಜೋರು ಮಳೆಯಲಿ ಮೊಣಕಾಲು ನೀರಲ್ಲಿ ನಿನ್ನ ಶರ್ಟಿನೊಳಗೆ ಬಚ್ಚಿಟ್ಟು ಕಾಪಾಡಿದ ನೆನಪು.

ಹಳೆ ನೆನಪು ಏನೇ ಇರಲಿ ಇಂದಿಗೂ ನೀ ಹೊಸಬ ..ಹೊಸ ಹೋಸ ವಿಷಯಗಳ ಸಮಗ್ರ
ಹೊಸ ಸ್ನೇಹಿತ..ಅದರೆ ಅದೇ ಹಳೆ ಪ್ರೇಮ.

ಜಗ ಮರೆಸೋ ಹೊತ್ತಿಗೆ
ಮೊಗದಲಿ ನಗು ತರಿಸೊ ಹೊತ್ತಿಗೆ
ಮನಸಾಯ್ತು ಮೆತ್ತಗೆ.


No comments: