Tuesday, 19 March 2024

ನಾ ಕನವರಿಸಿದ ಮೂಕಜ್ಜಿ

 

ನಾ ಕನವರಿಸಿದ ಮೂಕಜ್ಜಿ


ಕಾಡು ಕಂಡಿದ್ದನ್ನು ನಾಡು ಕಂಡಿತೇ
ಇಲ್ಲ ನಾಡು ಕಂಡಿದ್ದನ್ನು ಕಾಡು ಕಂಡಿತೇ
ಈ ಜೋಡು ಬೆಳೆದದ್ದು ಕಾಡಿನಲ್ಲೋ,
ಇಲ್ಲಾ ನಾಡಿನಲ್ಲೋ.
ಇಲ್ಲಾ ನಾಡುನುಡಿಗಳ ಚಿಂತನೆಯನ್ನು ಓಡು ಕಂಡಿತೇ
ಈ ಜಾಡು ಹಿಡಿದು ಹೊರಟವರು ಅದೆಷ್ಟು ಗಟ್ಟಿಗರು?
ಈ ಚಿಪ್ಪಿನ ಮೆದುಳು ಕಲ್ಪಿಸಿದೆಷ್ಟು? ಗ್ರಹಿಸಿದೆಷ್ಟು?

ಬಹುಶಃ ಆ ಕಾಡು ನಾಡನ್ನು ಕಂಡಿರಲಿಕ್ಕಿಲ್ಲ,
ಕಾಡ ಕಡಿದು ನಾಡ ಮಾಡಿ ಜೋಡಿಯಾಗಿ ಬಾಳಿದ್ದನ್ನು ಯಾರೂ ಕಂಡಿರಲಿಕ್ಕಿಲ್ಲ.
ನಮ್ಮ ಗ್ರಹಿಕೆ ಅಲ್ಪವಾಗಿದ್ದರೆ ನಮ್ಮ ಕಲ್ಪನೆ ಅಗಾಧ.
ಅದೇ ನಮ್ಮ ಗ್ರಹಿಕೆ ಅನಂತವಾಗಿದ್ದರೆ ನಮ್ಮ ಕಲ್ಪನೆ ಆಗ ಕ್ಷಣಿಕ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ಮೂಕಜ್ಜಿಯ ಕನಸು ಇದೊಂದು ವಿಶಿಷ್ಟವಾದ ಅದ್ಭುತವಾದ ಕಾದಂಬರಿ.

ಅದೆಷ್ಟು ತಲೆಬುಡವಿಲ್ಲದ ಗೊಡ್ಡು ಸಂಪ್ರದಾಯಗಳು ನಮ್ಮಲ್ಲಿ ಬೆಳೆದು ಬಂದಿವೆ.
ಈ ಸಂಪ್ರದಾಯಗಳು ತಲಾತಲಾಂತರದಿಂದ ಬಂದಿದ್ದರೂ ನಾವೀಗ ಅದರ ಕೊಂಡಿ ಕಳಚಿಕೊಳ್ಳುವ ಪ್ರಯತ್ನದಲ್ಲಿದ್ದೇವೆ.ಇಂಥ ಕಾಲಘಟ್ಟದಲ್ಲಿ ಅದಕ್ಕೆ ಪ್ರೇರಣೆ ಎಂಬಂತೆ ಕಾರಂತರು ತಮ್ಮ ಮೂಕಜ್ಜಿಯ ಕನಸು ಎಂಬ ಕಾದಂಬರಿಯನ್ನು ರಚಿಸಿದರು.

ಲೇಖಕರಾದ ಡಾಕ್ಟರ್ ಕೆ. ಶಿವರಾಮ ಕಾರಂತರೆ ಹೇಳುವಂತೆ ಇಲ್ಲಿ ಕಥೆಗೆ ನಾಯಕರು ಇಲ್ಲ ನಾಯಕಿಯರೂ ಇಲ್ಲ. ಇಲ್ಲಿನ ಪಾತ್ರಗಳು ಜೀವಂತಿಕೆಯ ಸನ್ನಿವೇಶಗಳನ್ನು ನವಿರಾಗಿ ಕಟ್ಟಿಕೊಡುತ್ತದೆ.

ಈ ಕಾದಂಬರಿ ಓದುವ ಮೊದಲು ನನಗನಿಸಿದ್ದು ಹೀಗೆ..
ಮೂಕಜ್ಜಿಗೆ ಕನಸು ಬಿದ್ದಿರಲುಬಹುದು ಅಥವಾ ಯುವಜನತೆಯ ಮೇಲೆ ಅವಳು ಕನಸು ಕಟ್ಟಿಕೊಂಡಿರಲೂ ಬಹುದು ಆದರೆ ಲೇಖಕರಿಗೆ ಅವಳು ಹೇಗೆ ಪರಿಚಿತಳು? ಮೂಕಿಯಾದ ಅವಳು ಹೇಗೆ ವಿವರಿಸಿಯಾಳು?

ಕಾದಂಬರಿ ಓದಿ ಮುಗಿಸಿದ ನನಗೆ ವಸ್ತುಸ್ಥಿತಿಯ ಅರಿಯು ಬೇರೆಯೇ ಆಗಿತ್ತು.
ಮೊದಲ ಅಧ್ಯಾಯ ಓದುತ್ತಿರುವಂತೆ ಇದೊಂದು ಅಧ್ಯಯನದಿಂದ ಮೂಡಿಬಂದ ಬರಹವೆಂಬುದು ಸ್ಪಷ್ಟವಾಗುತ್ತದೆ.
ಇಲ್ಲಿನ ಪಾತ್ರಗಳು ಅದರದ್ದೇ ಆದ ಘನತೆಯನ್ನು ಸೃಷ್ಟಿಸಿಕೊಂಡಿವೆ.
ಈ ಪಾತ್ರಗಳು ಕಥೆಯಿಂದ ನಮ್ಮೊಂದಿಗೆ ಪಯಣಿಸುತ್ತ ನಮ್ಮ ಆಲೋಚನೆಗಳೊಂದಿಗೆ ವಿಮರ್ಶಿಸುತ್ತಾ ,ಚರ್ಚಿಸುತ್ತಾ, ಘರ್ಷಿಸುತ್ತಾ ಸಾಗುತ್ತದೆ.

ಬಾಲ್ಯದಲ್ಲಿ ವಿಧವೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ಮೂಕಜ್ಜಿಯು ಜೀವನದಲ್ಲಿ ಅದೆಷ್ಟು ನೋವುಗಳನ್ನು ಅನುಭವಿಸಿದರು ಅವಳ ಬದುಕುವ ಛಲ ನಮ್ಮಲ್ಲಿ ಆಶ್ಚರ್ಯ ಮೂಡಿಸುತ್ತದೆ.
ಮೂಕಜ್ಜಿಯು ಕೇವಲ ಒಂದು ಪಾತ್ರವಾಗಿರದೆ ನಮ್ಮಲ್ಲಿರುವ ಅನೇಕ ಸಂದೇಹಗಳಿಗೆ ತರ್ಕಬದ್ಧವಾದ ಉತ್ತರ ನೀಡುತ್ತಾ ಮೂಲ ಸ್ಥಿತಿಯ ಬಗ್ಗೆ ಚಿಂತಿಸುವಂತೆ ಮಾಡುತ್ತಾಳೆ.
ನಮ್ಮಲ್ಲಿರುವ ಸೃಷ್ಟಿಯ ಬಗ್ಗೆ ಅನೇಕ ಕುತೂಹಲಗಳು ಆಶ್ಚರ್ಯ ,ಭ್ರಮೆ, ನಂಬಿಕೆ-ಮೂಢನಂಬಿಕೆ ,ಶಾಸ್ತ್ರ ಹೀಗೆ ಹತ್ತು ಹಲವು ಮೂಕ ಪ್ರಶ್ನೆಗಳಿಗೆ ಅವಳ ಕನಸಿನಿಂದ ಸುಪ್ತ ಮನಸ್ಸಿನಿಂದ ಉತ್ತರ ದೊರೆಯಬಹುದು.

ಇಲ್ಲಿ ಲೇಖಕರು ಸಂಶೋಧನೆ ನಡೆಸಲು ಸುಬ್ಬರಾಯರಂತಹ ಪಾತ್ರ ಸೃಷ್ಟಿಸಿದ್ದಾರೆ.ಸುಬ್ಬರಾಯರ ಮುಖಾಂತರ ಅನೇಕ ವಿಚಾರಗಳ ಮಂಥನ ಮಾಡಿದ್ದಾರೆ. ವಿಚಾರಗಳನ್ನು ಶಾಸ್ತ್ರೀಯವಾಗಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ್ದಾರೆ.
ನೈಜತೆ ಹಾಗೂ ಮೂಢನಂಬಿಕೆಯ ಮಗ್ಗಲಲ್ಲೂ ವಿಮರ್ಶಿಸಿದ್ದಾರೆ, ಮೂಢನಂಬಿಕೆಯ ವಿಡಂಬನೆ ಮಾಡುತ್ತಾ ಅಲ್ಲಲ್ಲೆ ಹಾಸ್ಯದ ಲೇಪನ ಮಾಡಿರುವವರು.

ಕತೆಯಲ್ಲಿ ಅನೇಕ ವಿಚಿತ್ರವಾದ ಸಂಪ್ರದಾಯಗಳು ಹಾಗೂ ಸನ್ನಿವೇಶಗಳ ವಿವರಣೆ ಇದೆ. ಕೆಲವೊಂದು ಆಚರಣೆಗಳು ನಮಗೆ ಅಸಹ್ಯ ಉಂಟು ಮಾಡದೆ ಆಶ್ಚರ್ಯ ಸೃಷ್ಟಿಸುವಂತದ್ದು.
ಒಮ್ಮೊಮ್ಮೆ ತೀರಾ ಕಾಲ್ಪನಿಕ ಇರಬಹುದೆ? ಅಥವಾ ಹೀಗೊಂದು ಪ್ರಪಂಚ ಇದ್ದಿತೆ ಎಂದನಿಸುವುದುಂಟು.

ಇಲ್ಲಿ ಸಾವಿರಾರು ಧರ್ಮಗಳು ಬೆಳೆದುಬಂದಿವೆ ಈ ಎಲ್ಲ ಧರ್ಮಗಳಲ್ಲೂ ಕುಂದುಕೊರತೆಗಳನ್ನು ನಾವು ನೋಡಬಹುದು,  ಹಾಗಿರುವುದರಿಂದಲೆ ಯಾವುದನ್ನು ಒಪ್ಪಲಿ ಯಾವುದ ಬಿಡಲಿ ಎನ್ನುವ ಗೊಂದಲ ಮೂಡುವುದು ಸಹಜ.

ಒಂದು ಕಾಲದಲ್ಲಿ ಸುಂದರವಾದ ಸಂಸ್ಕೃತಿ ಕೆಲವೊಂದು ಆಚರಣೆಗಳು ಇಂದಿಗೆ ತಪ್ಪಾಗಿ ಕಾಣಿಸಬಹುದು.  ಆ ಕಾಲಘಟ್ಟದಲ್ಲಿ ಅದು ಸರಿಯಾಗಿರುತ್ತದೆ ಇಲ್ಲದಿದ್ದರೆ ಅಲ್ಲಿ ವಿರೋಧದ ಅಲೆಗಳು ಹೋರಾಟವಾಗಲೀ ನಡೆಯಬೇಕಾಗುತ್ತದೆ.

ಈ ಜಗತ್ತಿನಲ್ಲಿ ಅನೇಕ ನಾಗರಿಕತೆಗಳು ಹುಟ್ಟಿ ತಮ್ಮ ಸಿದ್ಧಾಂತಕ್ಕಾಗಿ ಹೋರಾಡಿ ಕೊನೆಗೆ ಅಧಃಪತನವಾಗಿದೆ. ಅವೆಲ್ಲರ ಮಿಶ್ರಣ ವೆಂಬಂತೆ ನಾವು ಇವಾಗ ನೋಡುವುದು ಶೇಷ ಮಾತ್ರ.ಈ ಶೇಷವನ್ನು ಪೂರ್ಣವೆಂದು ನಾವು ನಂಬಬೇಕೆ?

ಉದಾಹರಣೆಗೆ ಇಂದಿನ ಯುಗದಲ್ಲಿ ಜಗತ್ತಿನಾದ್ಯಂತ ಅನೇಕ ಆಚರಣೆಗಳನ್ನು ನೋಡಬಹುದು ಪಾಶ್ಚಾತ್ಯ ಸಂಸ್ಕೃತಿಗಳು ನಮಗೆ ಉಸಿರುಗಟ್ಟಿಸಿ ತಪ್ಪು ಪರಿಕಲ್ಪನೆಯನ್ನು ಮೂಡಿಸಿರಬಹುದು.ಆದರೆ ಅಲ್ಲಿನ ಜನತೆ ಅದನ್ನು ಮೆಚ್ಚಿ ಶ್ಲಾಘಿಸಿದರು.ಅವರೇನು ದಡ್ಡರೆ? ಅವರಿಗೆ ಸರಿ-ತಪ್ಪುಗಳ ಮಾನದಂಡಗಳು ಇಲ್ಲವೇ?

ಸರಿ-ತಪ್ಪುಗಳನ್ನು ಅಳೆಯುವ ಮಾನದಂಡವೆಂದರೆ ಆಗಿನ ಕಾಲಘಟ್ಟ ,ವಾತಾವರಣ ,ಪರಿಸ್ಥಿತಿ ಹಾಗೂ ಪ್ರಸ್ತುತ ಜನರ ಮನಸ್ಥಿತಿಗಳು. ನಾವಂದುಕೊಂಡಂತೆ ಸತ್ಯ ಸಾರ್ವಕಾಲಿಕವಾಗಿ ಇರಬೇಕಾಗಿಲ್ಲ.

ಕೇವಲ ನೋಟದಿಂದ ವ್ಯವಹಾರದಿಂದ ವ್ಯಕ್ತಿ ಅಥವಾ ವಸ್ತುವಿನ ಗುಣ ಸ್ವಭಾವವನ್ನು ಅರಿಯಲಾಗದು ನಾಲ್ಕು ಜನರಿಂದ ನಾಲ್ಕು ಮಗ್ಗುಲಲ್ಲಿ ವಿಮರ್ಶಿಸಿದರೆ ಅದರ ಒಳ ಹೊರವು ಅರಿಯುವುದು.

ನಮ್ಮೂರು ನಮಗೆ ಸ್ವರ್ಗ ಎನಿಸಬಹುದು. ಕೆಲವು ವ್ಯಕ್ತಿಗಳಿಗೆ ನಿಂತ ನೆಲವು ಕೊನೆಗೊಮ್ಮೆ  ಬಿಕೋ ಎನಿಸಬಹುದು.ಹೊಸತನಕ್ಕಾಗಿ ಹಾತೊರೆಯಬಹುದು. ಹೀಗೆ ಹಾಳು ಹಳೆಯದೆಲ್ಲವೂ ಹಳೆದು ಹೊಸದು ಹುಟ್ಟಿರಬಹುದು.

ರಾಜ್ಯ ದೊಡ್ಡದು, ರಾಜಧಾನಿ ಅದರ ಹೃದಯಭಾಗ, ನಮಗೆಲ್ಲರಿಗೂ ಅನಿಸುವುದಿಷ್ಟು ನಮ್ಮ ನಗರ ರಾಜ್ಯ ನಮ್ಮೂರು ರಾಜಧಾನಿ ನಾವಿಲ್ಲಿಯ ಪ್ರಜೆಗಳು.ನಮ್ಮೂರಲ್ಲಿ ಎಲ್ಲಾ ವೈಭೋಗಗಳಿವೆ ಕಲೆ-ಸಾಹಿತ್ಯ ವಾಸ್ತುಶಿಲ್ಪ ಯಾವುದಕ್ಕೂ ಕೊರತೆಯಿಲ್ಲ ಆದರೆ ನಮ್ಮನ್ನು ನಾವು ರಾಜರಾಗಿ ಎಂದು ಕಲ್ಪಿಸಿಕೊಂಡಿಲ್ಲ.
ಇದು ಈಗಿನ ಅನಿಸಿಕೆ ಅಷ್ಟೇ. ಈ ನಮ್ಮ ಅನಿಸಿಕೆಗೆ ಮೂಲ ಪ್ರೇರಣೆ ಎಲ್ಲಿಂದ ಬಂತೋ ತಿಳಿಯದು. ನಮ್ಮ ಇತಿಹಾಸ ಕೆದಕಿ ನೋಡಿದರೆ ತಿಳಿಯಬಹುದೇನೊ. ಆವಾಗ ಇಲ್ಲಿನ ಪ್ರತಿ ಕಲ್ಲುಗಳು ಮಾತನಾಡಬಹುದೇನೊ ಕಲ್ಪನೆಯಲ್ಲಿದ್ದ ರಾಜ ಸಿಕ್ಕರೂ ಸಿಗಬಹುದು.

ಕಥೆಯ ಮಧ್ಯದಲ್ಲಿ ಲೇಖಕರು ನಮ್ಮಲ್ಲಿರುವ ಜಾತಿ ಕಟ್ಟುಪಾಡು ಆದಿಯಿಂದಲೂ ಹುಟ್ಟಿದ್ದಲ್ಲ ನಾವೇ ನಮಗೆ ಬೇಕಾದ ಹಾಗೆ ಸೃಷ್ಟಿಸಿಕೊಂಡಿದ್ದೇವೆ ಎನ್ನುವುದನ್ನ ವಿವರಿಸುತ್ತಾರೆ.

ದೇವರು ಒಬ್ಬನಿದ್ದಾನೆ ಅವನು ಅವತಾರ ಪುರುಷನಲ್ಲ ಎಲ್ಲವನ್ನು ಸೃಷ್ಟಿಸಿದ ಅವನಿಗೆ ಮತ್ತೆ ಮತ್ತೆ ಅವತಾರವೆತ್ತಿ ಮುಕ್ತಿ ಕೊಡಬೇಕಾದ ಅವಶ್ಯಕತೆ ಇಲ್ಲ.ಇಲ್ಲಿ ನಮ್ಮನ್ನು ದೇವರು ಸೃಷ್ಟಿಸಿದ್ದು ಅಥವಾ ನಾವೇ ದೇವರನ್ನು ಸೃಷ್ಟಿಸಿದೆವೊ ಎನ್ನುವಂತಾಗಿದೆ.

ನಮ್ಮ ಕಲ್ಪನಾಶಕ್ತಿ ಗಳಿಗೆ ಹೆಸರುಕೊಟ್ಟು ದೇವರನ್ನು ನೂರು ಮಾಡಿದ್ದೇವೆ ಚೂರು ಮಾಡಿದ್ದೇವೆ ಅದು ಅವರವರ ನಂಬಿಕೆಗೆ ಬಿಟ್ಟಿದ್ದು.ಎಲ್ಲವೂ ನನಗೆ ಅರಿತಿದ್ದರೆ ಎಲ್ಲರಂತೆ ಬದುಕುತ್ತಿರಲಿಲ್ಲ.

ನಮ್ಮಲ್ಲಿರುವ ಅದೇಷ್ಟು ಸಂಪ್ರದಾಯಗಳನ್ನು ಬಯಲಿಗೆಳೆಯುತ್ತಾರೆ. ಯಾವುದು ಸತ್ಯ ಯಾವುದು ಅಂಧಕಾರ.. ಯಾಕಾಗಿ ಹುಟ್ಟಿದ್ದು .ಅದನ್ನು ಸೃಷ್ಟಿಸಿದವರ ಉದ್ದೇಶವೇನು? ಆ ಉದ್ದೇಶ ಮುಟ್ಟಿತೆ?
ಪುನರ್ಜನ್ಮವೆಂಬುದೊಂದಿದೆಯೇ. ಹಾಗಿದ್ದರೆ ನಾವೆಷ್ಟನೆ ಜನ್ಮ? ಎಷ್ಟೇ ನೆನಪಿಸಿಕೊಂಡರು ಹಳೆಯ ಜನ್ಮದ ನೆನಪೇಕೆ  ಬರುತ್ತಿಲ್ಲ.ಇಲ್ಲಿರುವ ಸಂಬಂಧಗಳು ನಮಗೆ ಅಲ್ಲೂ ಇತ್ತೆ?
ನೆನಪಿಗೆ ಬರದ ಸಂಬಂಧಗಳು ಇದ್ದರೆಷ್ಟು ಬಿಟ್ಟರೆಷ್ಟು.

ಹಿಂದೆ ಅದೆಷ್ಟು ಆಡಂಬರ ಗತವೈಭವ ಸಿರಿ-ಸಂಪತ್ತು ಸಂತೃಪ್ತಿ ಇತ್ತೆಂದು ಕೇಳಿದ್ದೇವೆ ಆದರೆ ನೋಡಿಲ್ಲ.
ಅಂತ ಗತವೈಭವ ಇದ್ದಿತೆ? ಅದು ಕೇವಲ ಕಲ್ಪನೆಯೆ?
ಉದಾಹರಣೆಗೆ ನೂರು ವರ್ಷದವರು ನಮಗೆ ಸಿಕ್ಕರೆ ಅವರಿಂದ ಇನ್ನೂ ನೂರು ವರ್ಷಗಳ ಇತಿಹಾಸ ಕೇಳಿ ತಿಳಿಯಬಹುದು.ಒಂದು ವೇಳೆ ಅವರನ್ನು ಕೇಳಿದ್ದೆ ಆದರೆ ಅವರು ಹೇಳುವ ಮಾತು, ಬರಿ ಮಾತಲ್ಲ  ಅನುಭವ. ಅಂದಿನ ಕಷ್ಟದ ಬದುಕು ಒಂದು ಊಟಕ್ಕೂ ಕಷ್ಟ ಪಡುತ್ತಿದ್ದಿದ್ದು ಇವೇ  ಮುಂಚೂಣಿಯಲ್ಲಿರುತ್ತವೆ.
ಹಾಗಾದರೆ ಯಾವುದು ಸತ್ಯ? ಕಲ್ಪನೆಯನ್ನುವುದು ಎಲ್ಲಾ ಸತ್ಯವನ್ನು ಮುಚ್ಚಿಡುವ ಪೊರೆಯೆ?ಅದನ್ನು ಕಳಚುವವರಾರು?.

ಅದೆಷ್ಟು ಗೊಡ್ಡು ಸಂಪ್ರದಾಯಗಳು ನಮ್ಮಲ್ಲಿದ್ದರೂ ನಮ್ಮ ಸಂಸ್ಕೃತಿಯ ಬಗ್ಗೆ ನಾವು ಹೊಗಳಿಕೊಳ್ಳುವುದು ಬಿಟ್ಟಿಲ್ಲ.ಅಂತಹ ಧೈರ್ಯವು ನಮಗೆ ಇನ್ನು ಬಂದಿಲ್ಲ. ಆದರೆ ಮೂಕಜ್ಜಿಯು ನಮ್ಮಲ್ಲಿರುವ ಕೇಳಲಾಗದ ಪ್ರತಿರೋಧಿಸಲು ಆಗದ ಹತ್ತು ಹಲವು ಪ್ರಶ್ನೆಗಳನ್ನು ಸವಾಲೆಸೆದು ಎದುರಿಸಿ ನಿಂತವರು.

ಸಾವಿರಾರು ವರ್ಷದ ಇತಿಹಾಸ ವನ್ನು ಕೆದಕುವ ಸಾಹಸ ಲೇಖಕರು ಮಾಡಿದ್ದಾರೆ.ಆದರೆ ಅವುಗಳಿಗೆಲ್ಲ ನಮ್ಮ ಆತ್ಮಸಾಕ್ಷಿಯ ನೇರಕ್ಕೆ ಉತ್ತರವನ್ನು ನಾವು ಅರಿಯಬೇಕು.

ಮೂಕಜ್ಜಿಯ ಅದೆಷ್ಟು ನೇರ ಉತ್ತರ ನೀಡಿದರೂ ನಮ್ಮ ಜ್ಞಾನಕ್ಕೆ ದೊರೆಯುವಂತದಲ್ಲ. ಆದರೆ ನಮ್ಮ ಚಿಂತನೆಗೆ ಕಿಚ್ಚು ಹೊತ್ತಿಸುವಂತದ್ದು.

ಕತೆಯಲ್ಲಿ ಲೇಖಕರು ಆರಿಸಿಕೊಂಡ ವಿಷಯ ಮತ್ತು ವಸ್ತು ವಿಶಿಷ್ಟವಾದದ್ದು.ಅವರ ತರ್ಕಬದ್ಧ ನಿರೂಪಣೆ ಮೆಚ್ಚುವಂಥದ್ದು.ಮೌಢ್ಯತೆಯ ಆಚರಣೆಯೊಂದಿಗೆ ಹುಟ್ಟಿಕೊಂಡ ಕಥೆ ,ಚೈತನ್ಯದ ಹೊಸ ಬದಲಾವಣೆಯೊಂದಿಗೆ ಮುಗಿಯುವದು‌ ವಿಶೇಷ.

ಇಲ್ಲಿ ನನ್ನ ಅರಿವಿನ ಶಕ್ತಿಗನುಗುಣವಾಗಿ ನನ್ನದೇ ನಿಲುವಲ್ಲಿ  ವಿಮರ್ಶಿಸಲು ಪ್ರಯತ್ನಿಸಿರುವೆ..
ನೀವು ಸಹ ಈ ಕಾದಂಬರಿಯನ್ನು ಮರೆಯದೆ ಓದುವಿರೆನ್ನುವ ಆಶಯ ನನ್ನದು. ಕಾದಂಬರಿ ಓದಿದ ನಂತರ ನಿಮ್ಮ ವಿಮರ್ಶೆಯನ್ನು ನನ್ನೊಂದಿಗೆ ಹಂಚಿಕೊಳ್ಳಿ.
ಪ್ರತಿಕ್ರಿಯಿಸುವದನ್ನು ಮರೆಯಬೇಡಿ..

ಕಾದಂಬರಿ: ಮೂಕಜ್ಜಿಯ ಕನಸುಗಳು
ಲೇಖಕರು: ಡಾ.ಕೆ.ಶಿವರಾಮ ಕಾರಂತ


No comments: