ಮೇಘ
ಬಾನಂಗಳದ ಮೇರೆಯಲ್ಲಿ
ನಲಿವ ನವಿಲಂತೆ ಇದ್ದ ನೀ
ಗಾಳಿಯಾಟಕ್ಕೆ ಸಿಲುಕಿ ಚಿತ್ತಾರವಾದೆ.
ಬಿಸಿಯ ಕೋಪಕೆ ಮಣಿದು
ಕಾರ್ಮೋಡವಾದ ನೀ
ಕಂಬನಿಗೈದ ರೈತರ ಕಂಡು ನೀರಾದೆ.
ಚೈತ್ರದ ಹೂವನುಂಡು
ಸಂತಸದಿ ಬಾನೆತ್ತರಕೆ ಹಾರುವ
ದುಂಬಿಯ ಗುಂಗಿಗೆ ಹಾಡಾದೆ.
ತಂತುರು ಹನಿಗಳ ಮಿಲನದಿ
ಗಗನದಲಿ ರೋಚಕ ಸೃಷ್ಟಿಸಿ
ರಸಿಕರ ಹೃದಯಕ್ಕೆ ಕಾಮನ ಬಿಲ್ಲಾದೆ
ತಾರೆಗಳ ಲೋಕದಲಿ ತಾವರೆಯಾಗಿ
ರವಿ ಶಶಿಯರ ಕಣ್ಣಾಮುಚ್ಚಾಲೆ
ಆಟಕೆ ಅಂಕಣದ ಪರದೆಯಾದೆ..
No comments:
Post a Comment