ಮಂದಾರ ಪರ್ವತದಾಚೆ ಚಂದಿರ ಮರೆಯಾದಂತೆಲ್ಲ ಮಂಜಿನ ಹನಿಗಳು ಇಳೆಗಿಳಿದು ಮುತ್ತಿನಂತೆ ಪೋಣಿಸಲ್ಪಡುತ್ತಿದ್ದವು. ಹುಲ್ಲು ಹೊದ್ದ ಮಾಡು ತಣ್ಣಗಾಗುತ್ತಿದ್ದಂತೆ ಒಳಗಡೆ ಬೆಚ್ಚನೆಯ ಅನುಭವ ನೀಡುತ್ತಿದೆ. ಮಾಗಿಯ ಚಳಿಯಲಿ ಮೇಘಗಳಿಂದ ಉದುರಿದ್ದ ಹನಿಗಳು ಜೋಗಿಯ ಜೋಳಿಗೆ ತುಂಬಿಸಿ ಭೂತಾಯಿಯನ್ನು ಹಸಿರಿನಿಂದ ಹೊದಿಸಿದೆ. ಹೊಸ್ತಿಲ ದಾಟಿ ಹೊರ ಬಂದ ಕೃಷ್ಣನಿಗೆ ದೂರದಲ್ಲಿ ಸಿಂಧು ಅತ್ತೆ ಮಗಳು ಸಿಂಚನಾ ಸೀರೆ ನೆರಿಗೆಯನ್ನು ಗದ್ದೆ ಅಂಚಿನಿಂದ ಕೊಂಚ ಮೇಲೆತ್ತಿ ನಡೆದು ಬರುತ್ತಿರುವುದು ಕಾಣಿಸುತ್ತಿತ್ತಾದರೂ ಅವಳ ಹಿಂದೆ ನಡೆದು ಬರುತ್ತಿದ್ದ ಆಸಾಮಿಯ ಗುರುತಾಗಲಿಲ್ಲ. ಚಳಿಗಾಲದ ಮುಂಜಾವಿನಲ್ಲಿ ಇಬ್ಬನಿಯ ಹನಿಗಳು ಗದ್ದೆಯ ಅಂಚಿನ ಮೇಲೆ, ಬೆಳೆದ ಹುಲ್ಲಿನ ಮೇಲೆ ಬಿದ್ದು ಪಳ ಪಳ ಹೊಳೆಯುತ್ತಿತ್ತು..ಆಳೆತ್ತರಕೆ ಬೆಳೆದ ಭತ್ತದ ಪೈರು ಗಾಳಿಯ ರಭಸಕ್ಕೆ ದಾರಿಗಡ್ಡವಾಗಿ ಬಿದ್ದಿದ್ದವು.. ಎಲ್ಲಾ ಸರಿಯಾಗಿ ಇದ್ದಿದ್ದರೆ ಸಿಂಚನಾ ಈ ಮನೆಯ ಮುದ್ದು ಸೊಸೆಯಾಗಬೇಕಿತ್ತು. ಅಪ್ಪ ಮತ್ತೆ ಅತ್ತೆಗೆ ಯಾವಗಲೂ ಹೊಂದಾಣಿಕೆ ಇದ್ದಂತಿರಲಿಲ್ಲ. ಅವರಿಬ್ಬರ ವೈಮನಸ್ಸಿಂದ ಇಂದು ಎಳೆಮನಸ್ಸುಗಳು ದೂರ ದೂರ ಉಳಿಯಬೇಕಾಗಿ ಬಂದದ್ದಂತು ನಿಜ.
ಅಪ್ಪನ ಕಾಲ ಮುಗಿದು ಸುಮಾರು ವರ್ಷವೇ ಆಯ್ತು.ಆದರೆ ಹಳಿಸಿದ ಸಂಬಂಧ ಉಳಿಸಿ ಬೆಳಸಲು ಯಾರಿಗೂ ಇಷ್ಟ ಇದ್ದಂತಿರಲಿಲ್ಲ.
ಇನ್ನೇನು ಅಂಗಳಕ್ಕೆ ಕಾಲಿಡುತ್ತಾರೆ ಎನ್ನುವಾಗ ಕೃಷ್ಣ ಸೀದಾ ಒಳ ನಡೆದಿದ್ದ..ಮನೆಯಂಗಳದ ಕಾಲು ದಾರಿ ಬಳಸಿ ಮಂದೆ ಸಾಗುತ್ತಿರುವಂತೆ ಮತ್ತೆ ಇಣುಕಿ ನೋಡಲು ಹೊರ ಬಂದಿದ್ದ. ಅದ್ಯಾಕೊ ಭಾರದ ಹೃದಯದ ದೂರದ ನೆನಪುಗಳನ್ನು ಮೆಲುಕು ಹಾಕಲು ಯಾರಿಗೂ ಇಷ್ಟವಿರಲಿಲ್ಲ.
ಇಂದು ಶ್ರಾವಣ ಶುಕ್ರವಾರ ಅಮ್ಮನವರ ದೇವಸ್ಥಾನಕ್ಕೆ ಸಿಂಚನಾ ಹೊರಟಿದ್ದು ಬೆಳಿಗ್ಗೆ ಬೇಗನೆ..
ತಡವಾದಷ್ಟು ಜನಸಂದಣಿ ದಟ್ಟವಾಗುತ್ತಿತ್ತು.
ಸುತ್ತಿ ಸುತ್ತಿ ಹೋಗುವುದಕ್ಕಿಂತ ಅತ್ತೆ ಮನೆಯ ದಾರಿ ಹತ್ತಿರವಾದುದರಿಂದ ಹೀಗೆ ಬಂದಿದ್ದಳು.
ಪೂರ್ವಜರು ಮಾಡಿಟ್ಟಿದ್ದ ಆಸ್ತಿ ಬಹಳಷ್ಟಿದ್ದರೂ ಅದ್ಯಾವುದು ನಮ್ಮ ಹೆಸರಲ್ಲಾಗಲಿ ಅಪ್ಪನ ಹೆಸರಲ್ಲಾಗಲಿ ಇರಲಿಲ್ಲ. ಒಂದು ವೇಳೆ ಇದ್ದಿದ್ದರೂ ಅಪ್ಪನ ಸ್ವಾರ್ಥಕ್ಕೆ ಬಲಿಯಾಗಿ ಇಂದಿಗೆ ಅವಶೇಷಗಳು ಸಹ ಉಳಿಯುತ್ತಿರಲಿಲ್ಲ.
ಸ್ವಂತ ತಂಗಿ ಮಕ್ಕಳನ್ನು ಬೀದಿಪಾಲು ಮಾಡಿದ ಮನುಷ್ಯ..ಇನ್ನು ಅಸ್ಥಿತ್ವವಿಲ್ಲದ ಆ ಆಸ್ತಿಯನ್ನು ಉಳಿಸುವನೆ..
ಹೇಳಲಿಕ್ಕೆ ಆದಿಮನೆ..ದ್ವೇಷ,ಅಸೂಯೆಗಳ ಬೆಂಕಿ ಉರಿದು ಬೂದಿಯಾಗಿ..ಅಂತ್ಯ ಕಾಣುತ್ತಿದೆ..
ಹಿರಿಮಗ ವೇದಕೃಷ್ಣ ಆ ಮನೆಯನ್ನು ಬಿಟ್ಟು ತುಂಬ ವರ್ಷಗಳೆ ಕಳೆದವು..
ಸನ್ಯಾಸಿ ನೆಮ್ಮದಿ ಅರಸಿ ಪರ್ಣಕುಟೀರ ಕಟ್ಟಿಕೊಂಡಂತೆ
ಹುಲ್ಲು ಮಾಡುಗಳ ಜೋಪಡಿಯಲ್ಲಿ ಸಂತೃಪ್ತಿ ಕಂಡವನು.
ತಂದೆಯನ್ನು ನಿಂದಿಸಲಾಗದೆ ಕೋಪವನ್ನು ಬಂಧಿಸಲಾಗದಾಗ ಕಂಡುಕೊಂಡಿದ್ದ ಮಾರ್ಗ ಇಂದು ಅವನನ್ನು ಒಬ್ಬಂಟಿಯನ್ನಾಗಿಸಿತ್ತು.
ಪದವಿದಾರನಾದರೂ ಬಂದ ಉದ್ಯೋಗವನ್ನೆಲ್ಲ ನಿರಾಕರಿಸಿ ಹೊಲ ಗದ್ದೆ ಅಂತ ದುಡಿದವನಿಗೆ ದಕ್ಕಿದ್ದೇನು ಇಲ್ಲ.
ಅಬ್ಬಾ ಎಷ್ಟೊಂದು ರಶ್...ಹೊತ್ತು ಕಳೆದು ಹತ್ತು ಘಂಟೆನೇ ಸರಿದೊಯ್ತು..ಬೇಗ ಮನೆಗೆ ಹೋಗೋಣ ಎಂದುಕೊಂಡರೆ ಲೇಟಾಯ್ತಲ್ಲ..ಎಂದು ಬೇಗ ಬೇಗನೆ ಹೊರಟಳು ಸಿಂಚನಾ.
ಎಂಟು ತಿಂಗಳ ಮಗುವನ್ನು ಅಜ್ಜಿ ಜೊತೆ ಬಿಟ್ಟು ಬಂದಿದ್ದಳು..ಅವಳದ್ದು ಯಾತನೆ ಬದುಕು..ಕಟ್ಟಿಕೊಂಡ ಗಂಡ ಬಿಟ್ಟು ಹೊಗಿದ್ದ ..ಎಷ್ಟು ದೇವರ ಬೇಡಿದರೇನು..ಇಷ್ಟ ಪಟ್ಟ ಬಾಳು ದೊರೆತಿರಲಿಲ್ಲ.
ವೇದಕೃಷ್ಣನೆಂದರೆ ಸಿಂಚನಾಗೂ ತುಂಬ ಇಷ್ಟ...ಯಾರಿಗೆ ತಾನೆ ಇಷ್ಟವಾಗದು ಈ ಅಪರಂಜಿಯಂತಹ ಹುಡುಗನನ್ನು ಕಂಡರೆ..ಸಾಲದಕ್ಕೆ ಅತ್ತೆ ಮಗ ಬೇರೆ..
ವಿಧಿಯ ಆಟದಲ್ಲಿ ಕೃಷ್ಣನನ್ನು ತನ್ನ ಪಾಲುದಾರನಾಗಿ ಮಾಡಿಕೊಳ್ಳಲು ಸಿಂಚನಾ ಇಷ್ಟ ಪಟ್ಟಿರಲಿಲ್ಲ..
ಆದರೂ ಇತ್ತಿಚೆಗೆ ಸಿಂಚನನ ಬೇಟಿಯಾಗಲು ಬಯಸಿದ್ದ..ಅವಳಿಗಿಷ್ಟವಿದ್ದು ಅವನ ಅಹ್ವಾನ ತಿರಸ್ಕರಿಸಿದ್ದಳು..ಎಲ್ಲಿ ಅವನಿಗೆ ಕರಗಿ ಹೋಗವೆನೆಂದು ಭಯ ಬಿದ್ದಂತಿತ್ತು.
ದೀರವ್ ಯಾವತ್ತೂ ಸಿಂಚನನಾ ದೃಷ್ಟಿಯಲ್ಲಿ ಯೋಚಿಸಿಯೇ ಇರಲಿಲ್ಲ. ಒಂದು ವೇಳೆ ಯೋಚಿಸಿದ್ದೆ ಆಗಿದ್ದಿದ್ದರೆ ತನ್ನ ಮೂರು ಮಕ್ಕಳೊಂದಿಗೆ ಸಿಂಚನನ ಮಗುವಿಗೂ ಒಳ್ಳೆ ಅಪ್ಪನಾಗಿರುತ್ತಿದ್ದ..
ವಿಧಿಯಾಟವೇ ಹೀಗೆ ಗೊತ್ತಿದ್ದು ಗೊತ್ತಿದ್ದು ಸಿಂಚನಾ ಪ್ರಪಾತಕ್ಕೆ ಬಿದ್ದವಳು.ಅವಳ ತಾಳ್ಮೆ ಶಬರಿಗಿಂತ ಮುಂದಿತ್ತು..ಈ ನಾಲ್ಕು ವರ್ಷದಲ್ಲಿ ಯಂತ್ರ ,ತಂತ್ರ,ಮಂತ್ರ ದೀರವ್ ಗೆ ಏನು ಮಾಡಲಿಲ್ಲ..ವಶೀಕರಣಕ್ಕೆ ಸುರಿದ ಹಣ ಯಾರ್ಯರ ವಶವಾಯ್ತು.
ಅಮ್ಮ,ತಮ್ಮ ಹಾಗೂ ಸಿಂಚು ಮೂರರ ಬದುಕಲ್ಲಿ ಬಂಧುಗಳು ದೂರ ದೂರ..ಕಾಲೇಜು ಹುಡುಗಿ ಮನೊರಂಜನೆ ಅಂದ್ರೆ ಮಾಮೂಲಿ ಟ.ವಿ..ಅದನ್ನ ಸಹ ನೋಡಬೇಕಂದರೆ..ಮೂರು ಹರಿದಾರಿ ದೂರದ ವಸಂತಕ್ಕನ ಮನೆ....
ವಸಂತಕ್ಕನ ಮೂರು ಗಂಡು ಮಕ್ಕಳು ಬಾಂಬೆಯಲ್ಲಿದ್ದರೂ ಮುದ್ದಿನ ಮಗಳು ಮಾತ್ರ ಊರಲ್ಲಿ..ಅಗರ್ಭ ಶ್ರೀಮಂತರಲ್ಲದಿದ್ದರೂ..ಮನೆಯಲ್ಲಿ ಟಿವಿ ,ಪ್ರಿಡ್ಜ್ ಆ ಕಾಲದಲ್ಲೆ ತಂದಿದ್ದರು..ಗಂಡು ಮಕ್ಕಳ ಸಂಪಾದನೆ ಜೋತೆ ಗಂಡನ ಸಂಬಳ ಹೀಗೆ ಐಶ್ಯರಾಮಿ ಜೀವನ. ಮಗಳಿಗೂ ಸಿಂಚನಾಗೂ ಸರಿ ಸುಮಾರು ಒಂದೆ ವಯಸ್ಸು ಹೀಗಾಗಿ ಗೆಳತಿಯರಾಗಿದ್ದರು..ಕಾಲೇಜು ರಜೆಯಿರುವಾಗೆಲ್ಲ ಅವರ ಮನೆಯಲ್ಲೆ ಉಳಿದು ಕೊಳ್ಳುತ್ತಿದ್ದಳು. ಒಂದಿನ ಮಗನ ಸ್ನೇಹಿತ ದೀರವ್ ಬಾಂಬೆಯಿಂದ ಬಂದಿದ್ದ..ಅವರ ಅಮ್ಮ ಅವನಿಗಾಗಿ ಹುಡುಗಿ ಹುಡುಕುತ್ತಿದ್ದನ್ನು ಮನಗಂಡಿದ್ದರು ವಸಂತಕ್ಕ..
ಹರೆಯದ ಹುಡುಗಿ ಅರಿಯದೆ ಸೋತಿದ್ದಳು ಕೃಷ್ಣನ ಮರೆತು.. ಮುಂದರಿಯದ ಕನಸ ಕಾಣಲು ಅವಳ ಮನಸ್ಸು ಸ್ವಚ್ಚಂದವಾಗಿ ಬಿತ್ತಿದ ಮೋಡಗಳಂತೆ ತೇಲತೊಡಗಿತ್ತು..
ಎಲ್ಲ ಸರಿಯಾಗಿತ್ತು ಈ ತುಂಬು ಕುಟುಂಬದಲ್ಲಿ. ಹೀಗೊಂದು ಎಲೆಮನೆಯಲ್ಲಿ ವಾಸಿಸುವೆಯೆನ್ನುವ ಕಲ್ಪನೆ ಸಹ ಇರಲಿಲ್ಲ..
ಮದುವೆಯವರೆಗೂ ಅಣ್ಣನ ಮುದ್ದು ತಂಗಿ.ಅದ್ಯಾಕೊ ಸಂಸಾರ ಬೆಳೆದಂತೆ ಸಸಾರವಾಗುತ್ತಿದ್ದಳು ಸಿಂಧು.. ಭಾಮೈದ ಮನೆ ಅಳಿಯನಾಗಿದ್ದೆ ಕಾರಣವಾಯ್ತೆನೋ..
ಹಾಗೂ ಹೀಗೂ ಹೊಸತನ ಎನಿಲ್ಲದಿದ್ದರೂ ಅಸಮಧಾನದ ಮದ್ಯ ಜೀವನವಂತು ಸಾಗುತ್ತಿತ್ತು.
ಸೌಂದರ್ಯ ದೇವತೆಯಂತಿದ್ದ ಸಿಂಧುವಿನ ಸಿಂಧೂರದ ಮೇಲೆ ಆ ವಿಧಿಯ ಕೆಂಗಣ್ಣು ಬಿದ್ದಿತೇನೋ
ಅತ್ಯಂತ ಕರಾಳ ದಿನವದು, ಹೆಣ್ಣಿನ ಸೌಂದರ್ಯಕ್ಕೆ ಕಳಸದಂತಿದ್ದ ಕುಂಕುಮವನ್ನು ಕಳಚಿಡಬೇಕಿತ್ತು..
ಈ ಸಮಾಜದ ಕೆಲವೊಂದು ಸಂಪ್ರದಾಯಗಳು ತುಂಬ ವಿಚಿತ್ರ.. ನನಗೊಂದಂತು ಆರ್ಥವಾಗುತ್ತಿಲ್ಲ ಸಮಾಜದ ಬುದ್ದಿಜೀವಿಗಳೆನಿಸಿಕೊಂಡ ನಮ್ಮಿಂದಲೇ ಬೆಂಬಲ ಪಡೆದು ಇಂದಿಗೂ ಬೆಳದು ನಿಂತಿದೆ.
ಹುಟ್ಟುತ್ತಲೇ ಅವಳು ಆ ಎಲ್ಲ ಹಕ್ಕುಗಳನ್ನು ಪಡೆದು ಬಂದಿರುತ್ತಾಳೆ,ಆದರೂ ಅದನ್ನು ಕಸಿದು ಕೊಳ್ಳಲು ನಾವ್ಯಾರು..
ಕರುಣೆ ತೋರದ ಬಂಧುಗಳು ಕರೆದು ಕಳಿಸುವ ನೆಪದಲಿ ಕರಿಮಣಿಯ ಕಡಿದು, ಕರದ ಕಡಗವ ಒಡೆದು ತರುಳೆಯ ಕರುಳ ಹಿಂಡುವರು..ಇದಕ್ಕೊಂದು ಸಂಪ್ರದಾಯದ ಬಣ್ಣ ಹಳೆದ ಬಿಳಿ ಸೀರೆಯ ಉಡಿಸುವರು.
ಎರಡು ಎಳೆ ಜೀವದೊಂದಿಗೆ ಮಾಸಿದ ಬದುಕ ಕಟ್ಟಿಕೊಳ್ಳುತಿರುವಾಗಲೇ ಅಣ್ಣನ ಚುಚ್ಚು ಮಾತುಗಳು ಘಾಸಿಗೊಳಿಸುತ್ತಿದ್ದವು.ಇದೊಂತರ ಅಡಕತ್ತರಿಯ ಜೀವನ..ಸವೆಸಬೇಕೆ ಹೊರತು ಮುಗಿಸಲಾಗದು.
ದುರಂತದ ದಿನಗಳು ಅವಳಿಗಾಗಿಯೇ ಸಿದ್ದವಾಗಿದ್ದವು.ಹಳೆ ಮನೆಯಿಂದ ಎಲೆಮನೆಯ ಕಡೆ ಸಾಗಬೇಕಿತ್ತು.
ಅದೊಂದು ದಿನ ಮನಸ್ಸು ಗಟ್ಟಿ ಮಾಡಿಕೊಂಡು ಹೊರ ಹೋದವಳು ಹಿಂದಿರುಗಿ ತವರ ನೋಡಲೇ ಇಲ್ಲ.
ಸಂಬಂಧ ಬೆಸೆಯುವ ಸಂಬಂಧಿಕರಗೆ ಎಳ್ಳು ನೀರು ಬಿಟ್ಟಾಗಿತ್ತು.ಮುಗ್ದ ಮನಸ್ಸುಗಳು ಮಾತ್ರ ನಲುಗಿದ್ದವು.
ಪಾಪ ಏನು ತಪ್ಪು ಮಾಡದ ಕೃಷ್ಣ ಹಾಗೂ ಸಿಂಚನರ ದೂರ ದೂರ ಮಾಡಿದ್ದರು..
ಕನಸಲ್ಲು ಕಾಡುವ ಅವನ ಪ್ರೀತಿಯನ್ನು ಎದೆಯಲ್ಲೆ ಬಚ್ಚಿಟ್ಟುಕೊಂಡು ಅವನತಿ ಮಾಡಿದಳು.
ವಸಂತಕ್ಕನ ಮನೆಯಲ್ಲಿ ದೀರವ್ ನ ನೋಡಿದ ಮೇಲೆ ಹೊಸ ಭಾವನೆ ಮೂಡಿತವಳಿಗೆ..ಕೈಗೆ ಸಿಗದ ಕೃಷ್ಣ ದೀರವ್ನ ಮುಂದೆ ಒಂದರೆಗಳಿಗೆ ಮಸುಕಾಗಿದ್ದಂತು ನಿಜ.
ಅವನ ಕದ್ದು ಕದ್ದು ನೋಡುವ ಮುದ್ದು ನೋಟದಲ್ಲಿ ಅವಳು ಕಳೆದು ಹೋಗಿದ್ದಳು.
ಈ ವಯಸ್ಸಲಿ ಮನದಲಿ ಮೂಡುವ ಭಾವಗಳು ಬನದಲಿ ಅರಳುವ ಹೂವಗಳಂತೆ..
ಏನೇ ಸಿಂಚು ನಗ್ತಿದಿಯಾ ..ಎನ್ ಯೋಚಿಸ್ತಿದಿಯಾ
ವಸಂತಕ್ಕನ ಮಾತಿಗೆ ಮರು ಉತ್ತರಿಸದೆ ಒಳನಡೆದಿದ್ದಳು ನಸು ನಗುತ್ತ.
ಕನಸು ಕಾಣಲು ಗುಡಿಸಲಾದರೇನು ,ಅರಮನೆಯಾದರೇನು..ಅಮ್ಮನಲ್ಲಿ ಹೇಳಲೋ ಬೇಡವೋ ..ನಾನಾಗಿ ಏನೇ ಹೇಳಿದರೂ ಅಮ್ಮ ತಲೆಗೆ ಹಾಕಿಕೊಳ್ಳಲಾರಳು.
ಒಂದರ್ಥದಲ್ಲಿ ವಸಂತಕ್ಕ ಆ ಮುಗ್ದ ಹುಡುಗಿಯ ತಲೆಯನ್ನು ಕೆಡಿಸಿದ್ದಂತು ನಿಜ.
ಬಿಳಿ ಹಾಳೆಯಲ್ಲಿ ಅದೇನೊ ಗೀಚುತ್ತಿದ್ದಳು.ರಂಗೇರಿದ ಬಾನಿನಿಂದ ಸೂರ್ಯ ಇನ್ನೇನು ವಿರಮಿಸಿ ಕತ್ತಲ ಸೃಷ್ಟಿಸಿ ಹೋಗಿದ್ದ.
ಓದಲು ಹಿಡಿದ ಪುಸ್ತಕ ಮತ್ತೆ ಮಡಿಚಿದಳು. ಮಸ್ತಕದ ತುಂಬೆಲ್ಲ ತುಂಬಿರುವ ಆಲೋಚನೆಗಳು ಬೆಳಕಿಲ್ಲದೆ ಮಬ್ಬಾಗಿದ್ದವು.
ಚಿಮಣಿ ದೀಪ ಹುಳಗಳನ್ನು ಆಕರ್ಷಿಸಿಸಿ ಸೆಳೆದಂತೆಲ್ಲ ಅವಳಿಗೆ ಕಿರಿ ಕಿರಿಯಾಗುತ್ತಿತ್ತು.
ಸಿಂಚು ಸೀಮೆ ಎಣ್ಣೆಯಿಲ್ಲ ದೀಪ ಆರಿಸಿ ಮಲಗು..ಎಂದ ಅಮ್ಮ ನ ಮಾತಿಗೆ ಹೂಂ ಎಂದವಳೆ ಹೋಗಿ ಮಲಗಿದ್ದಳು..ಆದರೆ ನಿದ್ದೆ ಕಣ್ಣಿಗೆ ಪೊರೆಯಂತೆ ಕಾಡಿಸುತ್ತಿತ್ತು.
ಒಂದು ವೇಳೆ ದೀರವ್ ನ ಮದುವೆಯಾದರೆ ಈ ಎಲ್ಲಾ ಕಷ್ಟಗಳಿಗೆ ಕೊನೆಯಿಡಬಹುದು.. ಅಮ್ಮನನ್ನು ಜೋತೆಗೆ ಮುಂಬಾಯಿಗೆ ಕರೆದುಕೊಂಡು ಹೋಗಬಹುದು. ಶ್ರಿಕಾಂತ್ ಕೂಡ ಅಲ್ಲೆನಾದ್ರು ಕೆಲಸ ಮಾಡಿಕೊಂಡಿರಲಿ..
ಅವಳು ಪ್ಲಾನ್ ಎ ಪ್ಲಾನ್ ಬಿ ಅಂತ ಲೆಕ್ಕಚಾರದಲ್ಲಿ ತೊಡಗಿದಳು.
ದೀರವ್ ಗೆ ಮುಂಬಾಯಿಯಲ್ಲಿ ಮೂರು ಹೋಟೆಲ್ ಇದೆಯಂತೆ..ಅಮ್ಮನ ಒತ್ತಾಯಕ್ಕೆ ಊರಿನ ಹುಡುಗಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾನೆ.
ದುಡ್ಡು ಚಿನ್ನ ಜಾಸ್ತಿ ಕೇಳಲ್ಲ ಅಂತೆ. ನಾಲವತ್ತು ಸಾವಿರ ಜೊತೆಗೆ ಹತ್ತು ಪಾವನ್ ಚಿನ್ನ.. ಚರ್ಚೆ ಮಾಡಿದ್ರೆ ಸ್ವಲ್ಪ ಕಮ್ಮಿ ಬರಬಹುದು. ನನ್ನ ಮಗಳಿಗೆ ಈ ಸಂಬಂಧ ತಂದ್ಕೊಳ್ಳ ಬಹುದಿತ್ತು..ಒಬ್ಬಳೆ ಮಗಳು ನನ್ನ ಕಣ್ಮಂದೆ ಇರಲಿ ಅಂತ ಬೇಡ ಅಂದೆ.. ಒಳ್ಳೆ ಸಂಬಂಧ ..ನೋಡು ಅಮ್ಮನತ್ರ ಮಾತಾಡು.
ವಸಂತಕ್ಕ ಹೇಳಿದ್ದು ನನ್ನೊಳ್ಳೆದಕ್ಕೆ ..ಅದೆ ಯೋಚನೆಯಲ್ಲಿದ್ದವಳು ಅಮ್ಮ... ಎಂದಳು..
ಏನು ಇನ್ನು ಮಲಗಿಲ್ವಾ..ನಾಳೆ ಕಾಲೇಜಿಗೆ ಹೋಗಲ್ವಾ..
ಅಲ್ಲಾ ಅಮ್ಮ..ವಸಂತಕ್ಕ ನಿಂಗೆ ಪ್ರೀ ಇದ್ದಾಗ ಮನೆಗೆ ಬಂದು ಹೋಗೋಕೆ ಹೇಳಿದ್ರು..
ಏನಂತೆ ಅವಳಿಗೆ ನನ್ನ ಕೆಲಸವೇ ನಂಗೆ ಮಾಡಿ ಸಾಕಾಗುತ್ತೆ ..ಇನ್ನ ಅವಳ ಕೆಲಸ ಬೇರೆ..
ಅದ್ಕಲ್ಲಾ ಅಮ್ಮ..
ಒಂದ ಹುಡ್ಗ ಇದ್ದನಂತೆ..ಬೊಂಬಾಯಿಂದ ಬಂದವರು..ನಿನ್ ಜೋತೆ ಮಾತಡ್ಬೇಕು ಅಂದ್ಲು..
ಹುಂ ...ನಾಳೆ ನೋಡೋಣ..
ಅಬ್ಬಾ ಏನೋ ನೆಮ್ಮದಿ.. ಮಲಗಿದವಳಿಗೆ ಎಚ್ಚರವಾಗಿದ್ದು ಹೊಂಬೆಳಕ ಬಾಸ್ಕರ ಮುಗಿಲ ತೆರೆಗೆ ಬಂದಾಗಲೇ..
ದೀರವ್ ಊರಲ್ಲಿರುವುದು ಒಂದೇ ತಿಂಗಳು,ಅಷ್ಟರೊಳಗೆ ನಿಶ್ಚಿತಾರ್ಥ ನಡೆಯಲಿ.. ಮದುವೇ ಬೇಕಾದ್ರೆ ಅವಳ ಕಾಲೇಜು ಮುಗಿಲಿ.
ವಸಂತಕ್ಕನೂ ಒಪ್ಪಿದ್ರಿಂದ ಸಿಂಚನಳ ನಿಶ್ಚಿತಾರ್ಥಕ್ಕೆ
ಅಕ್ಕನ ಮನೆ ಚೊಕ್ಕವಾಗಿ ಶೃಂಗರಿಸಲ್ಪಟ್ಟಿತು. ಅಡ್ವಾನ್ಸ ಹಣಕ್ಕಾಗಿ ಮುಂದೆ ಶ್ರೀಕಾಂತನು ಕಾಲೇಜು ಬಿಡಬೇಕಾದ ಪರಿಸ್ಥಿತಿ ಬಂದೊದಗಿತು.
ಮೊಬೈಲ್ ಅಷ್ಟಾಗಿ ಪ್ರಚಲಿತವಿಲ್ಲದ ಕಾಲ..ಹಾಗಂತ ಮನೆಯಲ್ಲಿಲ್ಲದ ದೂರವಾಣಿಗಾಗಿ ಪ್ರತಿ ಬಾರಿ ವಸಂತಕ್ಕನ ಮನೆಗೆ ಹೋಗೊದು ಕಷ್ಟನೆ.
ಪತ್ರಗಳೊಂದಿಗೆ ಕುಶಲ ಸಮಚಾರ..
ರೀ ನಿಮ್ಮ ಪೋಟೊ ಒಂದನ್ನ ಕಳುಹಿಸಿ ಕೊಡಿ..
ಎಂದು ಬರೆದಿರೊದಕ್ಕೆ ಅವನೂ ಕಳುಹಿಸಿದ್ದ..
ದೀರವ್ ನ ಗಡ್ಡದಾರಿ ಪ್ರತಿಬಿಂಬಕ್ಕೆ ನಸುನಕ್ಕಿದಳು.
ಪೋನ್ ನಲ್ಲಿ ಮಾತಾಡುವಾಗ ಒಮ್ಮೆ ಯಾಕ್ರಿ ಗಡ್ಡ ಬಿಟ್ಟಿದ್ದಿರಿ ಎಂದು ಕೇಳಿದಕ್ಕೆ ಮೊದಲ ಹೆಂಡತಿ ಸೀಮಂತವಿತ್ತು ಎಂದು ನಕ್ಕಿದ. ತುಸು ಕೋಪಗೊಂಡವಳು ಪೋನಿಟ್ಟಳು..
ಮತ್ತೆ ಮತ್ತೆ ಮನಸ್ಸು ಶರಣಾಗಿದೆ
ಹುಸಿ ಕೋಪ ಚೂರಾಗಿದೆ ಕರಗಿ ನೀರಾಗಿದೆ..
ಇನಿಯ ನೀನಿಲ್ಲದೆ ಸನಿಹ ಬೋರಾಗಿದೆ...
ಚೇ...ನಾನೇನು ಮಾಡಿದೆ .
ಪಾಪ ಅವರು...
ನಾನೇ ಬೇಕಂತ ಸುಮ್ಮನೆ ಕೋಪ ಮಾಡ್ಕೊಂಡು ಸುಮಧುರ ಕ್ಷಣನ ಹಾಳು ಮಾಡಿದೆ.
ಮೂಗಿನ ತುದಿಯಲ್ಲಿರುವ ಈ ಕೋಪನ ಮೊದ್ಲು ಕಮ್ಮಿ ಮಾಡ್ಕೊಬೇಕು.ಹೀಗೆ ಆದ್ರೆ ಮುಂದೆ ಸಂಸಾರ ಕಷ್ಟ ಕಾಣೆ ಸಿಂಚನಾ.
ತನಗೆ ತಾನೆ ಬುದ್ದಿ ಹೇಳಿಕೊಳ್ಳುವಷ್ಟು ದೊಡ್ಡವಳಾಗಿದ್ದಳು.
ಹೆಚ್ಚೇನು ತಲೆ ಕೆಡಿಸಿಕೊಳ್ಳಲು ಸಮಯವಿರಲಿಲ್ಲ,ಮುಂದಿನ ವಾರದ ಪರೀಕ್ಷೆಗೆ ಇವಾಗಿಂದಲೇ ತಯಾರಿ ಮಾಡುತ್ತಿದ್ದಳು.
ಎಗ್ಸಾಂ ಮುಗಿಯುವರೆಗೂ ಪೋನ್ ಮಾಡಲ್ಲ ಎಂದವರು ಇಂದೇಕೆ ವಸಂತಕ್ಕನ ಮನೆಗೆ ೬ ಘಂಟೆಗೆ ಬರ ಹೇಳಿದರು..
ಬೇಗ ಬೇಗ ಓಡಿದವಳು ಮುಗ್ಗರಿಸಿದ್ದಳು..ಹುಡುಗಿಗೆ ಕಾಲುಂಗುರ ಹೊಸತಲ್ವ..ಬೆರಳಿಗೆ ಕಲ್ಲು ಪರಚಿತಷ್ಟೆ..
ಆ ಕಡೆಯ ಧ್ವನಿ ದೀರವನದ್ದಾಗಿರಲಿಲ್ಲ ಬದಲಿಗೆ ವಸಂತಕ್ಕನ ಮಗನದ್ದಾಗಿತ್ತು.
ಪರೀಕ್ಷೆ ಬರೆಯಲು ಕುಳಿತವಳಿಗೆ ಏನು ನೆನಪಿಗೆ ಬರುತ್ತಿರಲಿಲ್ಲ..ನಡುಗುತ್ತಿದ್ದಳು ಪೆನ್ನು ಹಿಡಿದ ಕೈ ಬೆವೆತುಕೊಳ್ಳಲು ಕಾರಣವಿಷ್ಟೆ. ನಿನ್ನೆ ವಸಂತಕ್ಕನ ಮಗ ಕಾಲ್ ಮಾಡಿದ್ದು ಅವನಂದ ಮಾತು ಕೇಳಿ ಭಯವಾಗಿತ್ತು.
ದೀರವ್ ಗೆ ಬಾಂಬೆಯಲ್ಲಿ ಒಬ್ಬಳು ಹುಡುಗಿ ಪರಿಚಯವಂತೆ.ಅಲ್ಲಲ್ಲಾ ಅವರು ಲವರ್ಸ ಅಂತೆ..ಮೊದಲು ನಂಗೂ ತಿಳಿದಿಲ್ಲ..ಗೊತ್ತಿದ್ರೆ ನಿಂಗೆ ಈ ಸಂಬಂಧ ಹೇಳ್ತಾನೆ ಇರಲಿಲ್ಲ.
ಮನೆಯಲ್ಲಿ ಮಾತಾಡು ಎಂದಿದ್ದ.
ಈಗವಳು ತನಗೆ ಬಿದ್ದಿದ್ದ ಎಲ್ಲ ಕನಸ್ಸನ್ನು ಎಳೆದು ತಂದಿದ್ದಳು, ಪ್ರಸ್ತತ ಸ್ಥಿತಿಗೂ ಹಳೆ ಕನಸಿಗೂ ತಾಳೆ ಹಾಕಲು. ಒಮ್ಮೊಮ್ಮೆ ಅವನಾಡಿದ ಮಾತು ನೆನಪಿಗೆ ಬರಲು ಅಳು ಸಹ ಬಂತು.
ನಿಶ್ಚಿತಾರ್ಥ ಸಹ ಮುಗಿದಿದೆ..ಆ ಎಳೆಮನಸ್ಸು ಎಷ್ಟಂತ ಯೋಚಿಸಿಯಾಳು..
ಪ್ರೀತಿಸಿದರೆ ಏನಂತೆ ..ಏನು ಮದುವೆ ಆಗಿಲ್ವಲ್ಲಾ..ಪ್ರೀತಿ ಬಲೆಯಲ್ಲಿ ಬೀಳದವರು ಯಾರಿದ್ದಾರೆ.ಇದೆಲ್ಲ ಮದುವೆ ಆಗುವ ತನಕ ಅಷ್ಟೇ.ಆಮೇಲೆ ಎಲ್ಲಾ ಸರಿಯಾಗುತ್ತೆ..
ಗೆಳತಿಯ ಸಮಜಾಯಿಸಿ ಕೊಂಚ ಸಮಧಾನ ತಂದಿತ್ತು..
ಹೌದು ನಿಶ್ಚಿತಾರ್ಥ ಆದಮೇಲೆ ಅರ್ಧ ಮದುವೆ ನಡೆದಂತೆ. ಈ ದ್ವಂದ್ವದಲ್ಲಿ ಅವಳೊಂದು ನಿರ್ಧಾರಕ್ಕೆ ಬಂದಿದ್ದಳು.ಏನೆ ಆಗಲಿ ಅದನ್ನು ಎದುರಿಸಲು ಸಿದ್ದಳಾಗಿದ್ದಳು.
ಮನೆಯಲ್ಲಿದ್ದ ಸಂಭ್ರಮ ಮನದಲ್ಲಿರಲಿಲ್ಲ.. ಮೌನದಲ್ಲಿದ್ದ ರೋಧನೆ ಮಾತಿನಲ್ಲಿರಲಿಲ್ಲ..ಎಲ್ಲವೂ ಸರ್ವೆಸಾಮನ್ಯವೆಂಬಂತೆ ನಡೆದು ಹೋಗುತ್ತಿತ್ತು.
ಹೆಸರು ಮಾತ್ರ ಕೃಷ್ಣ..ಹೆಸರಿಗೆ ತಕ್ಕಂತೆ ಅವನಿಲ್ಲ ..ಅವನು ಅಪ್ಪಟ ರಾಮನಂತೆ.
ಕೆಸರ ನೇಜಿಯಲ್ಲಿ ಉಸಿರು ಬಗೆದು ಬಿತ್ತಿದ್ದ ಬೀಜ, ಎಸಳು ಮೊಳೆಯದ ಸಸಿಯಂತಾಯ್ತು ಅವನ ನಂಬಿಕೆ.ಪ್ರೀತಿಗಾಗಿ ಅಷ್ಟೇನು ತಲೆಕೆಡಿಸಿಕೊಂಡವನಲ್ಲ ಆದರೂ ಮನೆಯೊಳಗಿನ ಕಿಚ್ಚು ಮನೆಯನ್ನೆ ಸುಟ್ಟಂತೆ ತನುವೊಳಗಿನ ಬೆಂಕಿ ಆರಿಸಲು ನಾಲ್ಕಾರು ತಣ್ಣೀರು ಸ್ನಾನ.
ಮನೆಯ ದಾರಿ ಮರೆತು ಹೋಗಿದೆ.ಸಾಗುವ ದಾರಿಯಲ್ಲಿದ್ದ ಸಾಲು ಸಾಲು ಸಾಗುವಾನಿ ಮರಗಳು ಕಾಣದಾಗಿದೆ.ಅಪ್ಪನ ಕುಡಿತದ ಅಮಲಿಗೆ ಅದೆಷ್ಟು ಮರಗಳು ಮರಣಿಸಿದವು.
ಯಾಕೊ ಮುಂದೆ ಕಾಲಿಡಲು ಮನಸ್ಸಾಗಲಿಲ್ಲ.. ಹಿಂದಿರುಗಿ ಹೊಳೆ ದಂಡೆಯ ಕಡೆ ನಡೆದ.
ಈ ಪ್ರಕೃತಿಯೇ ಹಾಗೆ ಸಮತೋಲನ ಕಾಯ್ದುಕೊಳ್ಳುತ್ತಿದೆ..ಬಿರು ಬಿಸಿಲು ಹೆಚ್ಚಾದಾಗ ಮತ್ತೆ ಮಳೆ ಸುರಿಸಿದಂತೆ, ಮನ ಸೀಳುವ ನೋವಿಗೆ ಮುಲಾಮು ಹಚ್ಚಿದಂತೆ, ಬಾಲಕನಾಗ ಹೊರಟಂತೆಲ್ಲ ಬಾಲಿಷವಾದ ಭಾವನೆಗಳೆ ಹೆಚ್ಚು.
ವೇದಕೃಷ್ಣನಿಗೆ ಮನಸ್ಸಿಗೆ ಬೇಜಾರಾದಂತೆಲ್ಲ ಇಲ್ಲಿಗೆ ಬರತ್ತಿದ್ದ..ಇಲ್ಲೆನೋ ಒಂತರ ಖುಷಿ ಅವನ ಮಾಮೂಲಿ ಜಾಗ.
ಶಾಂತವಾದ ನದಿಯಲ್ಲಿ ಒಂದು ಕಿಲೋಮೀಟರ್ ಈಜಿದರೆ ಸಾಕಿತ್ತು.ಈ ದ್ವೀಪ ಒಂದಿಪ್ಪತ್ತು ಎಕ್ರೆಯಷ್ಟಿರಬಹುದು. ಹುಲುಸಾಗಿ ಬೆಳೆದ ಹುಲ್ಲುಗಳಿಗಾಗಿಯೇ ದನ ಕರುಗಳು ನದಿಯಲ್ಲಿ ಮಿಂದು ಬರುತ್ತಿದ್ದವು.
ಆ ನಡುಗಡ್ಡೆ ಸುತ್ತಲೂ ನೀರಿನಿಂದ ತುಂಬಿರುವುದರಿಂದ ಶಾಂತತೆ, ನಿರಾಳತೆ ಮನೆ ಮಾಡಿತ್ತು. ಅದೆಂತಹ ಕಲ್ಪನೆ ಇವನದು.. ಇಲ್ಲಿಯೇ ಮಂಟಪ ಕಟ್ಟಿಸಿ ಸಿಂಚನಳ ಕೈ ಹಿಡಿಯಬೇಕೆಂದು ಕೊಂಡಿದ್ದ.
ಹುಲ್ಲು ಹಾಸಿನ ಮೇಲೆ ಮಲಗಿ ಸಂಜೆಯವರೆಗೂ ಆಕಾಶ ದಿಟ್ಟಿಸುತ್ತಿದ್ದ. ತುಂಬ ಎತ್ತರಕ್ಕೆ ಹಾರುತ್ತಿದ್ದ ಬಾವಲಿಗಳು T ರೀತಿಯಲ್ಲಿ ಕಾಣುತ್ತಿದ್ದವು.
ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಆ ಕಡೆಯಿಂದ ಈ ಕಡೆಗೆ..ಈ ಕಡೆಯಿಂದ ಆ ಕಡೆಗೆ ಹಾರುತ್ತಿದ್ದವು.ಅವುಗಳ ಲಯಭರಿತ ಹಾರಾಟ ಚುಕ್ಕಿಗಳಿಟ್ಟ ರಂಗೋಲಿಯಂತೆ ಕಾಣಿಸತ್ತಿತ್ತು..ಮೋಡಗಳಿಲ್ಲದ ಆಕಾಶ ಕೆಂಬಣ್ಣ ಹೊತ್ತು ನಿಂತಿದೆ.
ದೂರದಲ್ಲಿ ಕಾಣುವ ಅತ್ತೆಯ ಮನೆಯಲ್ಲಿ ಸಂಭ್ರಮ ಕಾವೇರಿತ್ತು...ಮಧುವಣಗಿತ್ತಿಯಂತೆ ಕಾಣುತ್ತಿರುವ ಸಿಂಚನಾ ನೆನಪಿಗೆ ಬಂದಳು.
ಇಷ್ಟು ದಿನ ಅವಳನ್ನು ದೂರವಿಟ್ಟವನಿಗೆ..ಇನ್ನೇನು ಅವಳು ಇನ್ನೊಬ್ಬನ ಮದುವೆಯಾಗುತ್ತಾಳೆ ಎಂದಗ ಅದುಮಿಟ್ಟ ದುಃಖ ಸಹಿಸಲಾಗಲಿಲ್ಲ...
ಇಂದಾದರೂ ಎಲ್ಲವ ಹೇಳಿ ಅತ್ತು ಬಿಡಲೇ ಅನಿಸಿತವನಿಗೆ..ಇಷ್ಟು ದಿನ ಕಡಿವಾಣ ಹಾಕಿದ್ದ ಅವನ ಮನಸ್ಸು ಮತ್ತೆ ಮತ್ತೆ ಅವಳಿಗೆ ಶರಣಾಗುತ್ತಿದೆ...
ಆದದ್ದು ಆಗಲಿ ಎಂದು ಅತ್ತೆ ಮನೆ ಕಡೆನೇ ನಡೆದಿದ್ದ...
ಅವನ ಮನದಲ್ಲಿ ಅಳುಕಾಗಲಿ ಅಂಜಿಕೆಯಾಗಲಿ ಕಾಣಲಿಲ್ಲ..
ಮುಂದೆ ಹೆಜ್ಜೆಯಿಟ್ಟಂತೆ ಅವನು ಯೋಜನೆಗೆ ಬದ್ದವಾಗಿದ್ದ.ಇನ್ನೆನು ಒಳಗಡಿಯಿಡಬೇಕೆನ್ನವಷ್ಟರಲ್ಲಿ ಸಿಂಧು ಅತ್ತೆಯ ಮನೆಯ ಎದುರಿಗಿದ್ದ ಮಾವಿನ ತೋರಣ ಅವನ ಅಣಕಿಸಿತು..
ಮನಸ್ಸು ಸ್ವಲ್ಪ ವಿಚಲಿತವಾಯ್ತು. ನಾನೇನ ಮಾಡ ಹೊರಟಿರುವೆ..ಇಷ್ಟೊಂದು ಸಂಭ್ರಮ ಮನೆಮಾಡಿರುವಾಗ ನಾನೆಲ್ಲ ಹಾಳು ಮಾಡಲು ಹೊರಟಿರುವುದು ಸರಿಯೇ..
ಯಾರಾದರೂ ನೋಡುವುದರೊಳಗೆ ಇಲ್ಲಿಂದ ಹೊರಟು ಹೋಗಬೇಕು. ಇದ್ದಕ್ಕಿದ್ದಂತೆ ಹೆಗಲ ಮೇಲೆ ಬಿದ್ದ ಕೈಗೆ ಬೆದರಿದ ಕೃಷ್ಣ,
ಅರೆ ...ಶ್ರೀಕಾಂತ್ ...
ಬನ್ನಿ..ಬನ್ನಿ ಭಾವ ಅಂತ ಕರೆದ ಅವನ ಆತ್ಮೀಯತೆಗೆ ಚಪ್ಪರದ ಒಳ ನಡದಿದ್ದ.
ಕಾಫಿ ಲೋಟ ತಂದಿಟ್ಟ ಸಿಂಚನನ ನೋಡುತ್ತಿದ್ದಂತೆ ಅವನಿಗೆ ಹುಡುಗಿ ನೋಡಲು ಬಂದಂತಹ ಅನುಭವ..
ಅವನ ದೃಷ್ಟಿ ಎದುರಿಸಲಾಗದೆ ಸಿಂಚು ತಲೆ ತಗ್ಗಿಸಿದ್ದಳು.
ಮಾತೆಲ್ಲ ಮರೆತು ಹೋಗಿದ್ದ ಕೃಷ್ಣನ ಶ್ರೀಕಾಂತ್ ಹೊರಗೆ ಕರೆತಂದಿದ್ದ ಮಾತನಾಡುವ ನೆಪವೊಡ್ಡಿ.
ಭಾವ..
ತುಂಬ ಆಲೋಚಿಸಿ ಸಾಕಾಗಿದೆ..ಮದುವೆಗೆ ಹಣ ಹೊಂದಿಸಲಾಗತ್ತಿಲ್ಲ. ತಪ್ಪು ತಿಳಿದುಕೊಳ್ಳಬೇಡಿ..ನೀವೆ ಏನಾದರೊಂದು ದಾರಿ ತೋರಿಸಬೇಕು.ನಮಗಂತ ಯಾರಿದ್ದಾರೆ.. ಕಣ್ಣಿನಿಂದ ಎರಡು ಹನಿ ಜಾರಿ ಬಿತ್ತು.
ಅಯ್ಯೋ ಇದಕ್ಕೆಲ್ಲ ಚಿಂತೆ ಮಾಡ್ಬಬೇಡಪ್ಪ ಏನಾದರೊಂದು ಮಾಡೋಣ ..ಎಲ್ಲ ದೇವರ ಇಚ್ಚೆಯಂತೆ ನಡಿಯುತ್ತೆ..
ಮಾತಿಗೇನೊ ಸಮಧಾನ ಮಾಡಿದ್ದ .ತನ್ನೊಡಲಿಗೆ ಬಿದ್ದ ಬೆಂಕಿ ಆರಿಸುವವರು ಯಾರು..
ಚಿಕ್ಕ ಚಿಕ್ಕ ವಿಷಯದಲ್ಲಿ ಸಂಭ್ರಮ ಸಡಗರ ತುಂಬಿತ್ತು..ಸಾಂಪ್ರದಾಯಿಕ ವಿಧಿ ವಿಧಾನದಲ್ಲೆ ಮದುವೆ ನಡೆದಿತ್ತು.ಕೊನೆಯಲ್ಲಾದ ವರೋಪಚಾರ ಲೋಪ ಬಿಟ್ಟರೆ ಉಳಿದೆಲ್ಲವು ಸಾಂಗವಾಗಿ ಸಾಗಿತ್ತು.
ಅಳುವ - ನಗಿಸುವ ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಕೊನೆಯಲ್ಲಿ ಉಳಿದ ಐದು ಮಂದಿ ಮನೆ ತುಂಬಿಸಿ ಬಂದಿದ್ದರು..
ದೂರದಲ್ಲಿದ್ದ ದೀರವ್ ಆಗಾಗ ಹೆಂಡತಿಯ ಯೋಗ ಕ್ಷೇಮ ವಿಚಾರಿಸುತ್ತಿದ್ದ.ಇಂದು ಅವಳ ಬಾಳಿನ ಸುಂದರ ಕ್ಷಣ ಮದುವೆಯಾಗಿ ನಾಲ್ಕು ತಿಂಗಳ ನಂತರ ಗಂಡನ ಕರೆಯೋಲೆ..ಇನ್ನು ಮುಂದೆ ಅವಳು ದೀರವ್ ನೊಂದಿಗೆ ಮುಂಬಾಯಿಯಲ್ಲಿ ನೆಲಸಬಹುದು.
ದೀರವ್ ನ ದಾರಿ ಎರಡು ದೋಣಿಗಳ ಮೇಲಿನ ಪಯಣದಂತಾಗಿದೆ.ತಾನೆಲ್ಲವ ನಿಭಾಯಿಸುವೆ ಎಂಬ ಹುಂಬ ಧೈರ್ಯದಲ್ಲಿ ಭಾವಿ ಪತ್ನಿಯ ಭಾವನೆಗೆ ದಕ್ಕೆ ಮಾಡದೆ ಕರೆಸಿಕೊಂಡಿದ್ದನು.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಮುಂಬಾಯಿಯಂತ ಮಹಾನಗರದಲ್ಲಿ ಜೀವನ ಕಟ್ಟಿಕೊಳ್ಳಲು ಬಂದವವನು ಇಂದು ದೊಡ್ಡ ಉದ್ಯಾಮಿ.
ಹೋಟೆಲ್ ಬ್ಯುಸ್ನೆಸ್ ಅವನ ಕೈ ಹಿಡಿದಿತ್ತು.
ಮೂರನೆಯ ಅಂತಸ್ತಿನಲ್ಲಿದ್ದ ನನ್ನನ್ನು ದಟ್ಟ ಹೊಗೆ ಆವರಿಸಿತು.ಭಯದಲ್ಲಿ ಹೊರಬಂದು ನೋಡಿದೆ.
ಆರ್ಧ ಎಕರೆ ವಿಶಾಲವಾದ ಜಾಗ ಎದುರಲ್ಲಿ ಮೂರು ಇಟ್ಟಿಗೆಗಳ ಒಲೆ ಅದ್ರಿಂದಲೆ ದಟ್ಟ ಹೊಗೆ ಏಳುತ್ತಿತ್ತು.
ಅದೊಂದು ಬಡತನದ ಕುಟುಂಬವಿರಬಹುದೆಂದು ನಾನು ಉಹಿಸಿದ್ದೆ. ಒಂದು ಬದಿಯಲ್ಲಿ ಎರಡು ರೂಮು, ರೂಮ್ಗಳಿಗೆ ಅದರದ್ದೆ ಆದ ಬಾಗಿಲುಗಳಿವೆ. ಎದುರಲ್ಲೆ ಮೂರು ಇಟ್ಟಿಗೆಗಳ ಒಲೆ.
ತಾಯಿ ಸರೋಜ ಬೆಳಿಗ್ಗೆ ಎದ್ದವಳೆ ಹಳೆ ಬ್ಯಾರಲ್ಗಳನ್ನು ಹುಲ್ಲಿನಿಂದ ಉಜ್ಜಿ ಉಜ್ಜಿ ತೊಳೆದು ನೀರು ತುಂಬಿಸುತ್ತಿದ್ದಳು.
ಪ್ರತಿ ದಿನ ಉಜ್ಜುವುದ ನಾ ನೋಡಿದ್ದೆ,ಅದರೂ ತಳದಲ್ಲಿ ಅಂಟಿರುವ ಮಣ್ಣು ಪ್ಲಾಸ್ಟಿಕ್ ಗೂ ತುಕ್ಕು ಹಿಡಿದಂತೆ ತೋರುತ್ತಿತ್ತು.ಬ್ಯಾರಲ್ ಆಳ ಆಳೆತ್ತರಕ್ಕಿರುವುದರಿಂದ ಅವಳ ಕೈ ಮುಕ್ಕಾಲು ಮಾತ್ರ ಸಲಿಸಾಗಿ ಎಟುಕುತ್ತಿತ್ತು.
ಮಾಲಿನಿ ಅವಳ ಒಬ್ಬಳೆ ಮಗಳು ವಯಸ್ಸು ಸುಮಾರು ಇಪ್ಪತ್ತು ಇರಬಹುದು..
ಮಾಲಿನಿ ಎದ್ದವಳೆ ಒಂದು ಉದ್ದನೆಯ ಪುಸ್ತಕ ಹಿಡಿದು ಬಂದಳು. ಮನೆಯ ಮುಂದೆ ಮೂರು ಕಲ್ಲಿನ ಒಲೆಯ ಮೇಲೆ ಯಾವಾಗಲೂ ಒಂದು ಮಡಿಕೆ ಇರುತ್ತಿತ್ತು. ಹೊಗೆ ಹಿಡಿದು ಮಣ್ಣಿನ ಮಡಿಕೆಯ ಹಾಗೆ ಕಾಣಿಸುತ್ತಿತ್ತು..ಮಣ್ಣಿನದೆ ಇದ್ದರೂ ಇರಬಹುದು.
ನಾನು ಕಂಡಾಗಲೆಲ್ಲ ಸ್ವಲ್ಪ ಬೆಂಕಿ ಇಣುಕಿ ಹೊಗೆಯಾಡಿದ್ದೆ ಜಾಸ್ತಿ.
ಬಿಸಿ ನೀರು ಇರಬಹುದೆ? ಅಥವಾ ಬೆಳಿಗ್ಗೆ ಗಂಜಿ ಇರಬಹುದೆ?
ಉದ್ದನೆಯ ಪುಸ್ತಕ ಹಿಡಿದ ಮಾಲಿನಿ ಹೊಗೆಯಾಡುತ್ತಿದ್ದ ಬೆಂಕಿ ಮುಂದೆ ಕುಳಿತು ಓದುತ್ತಾಳೆ ಎಂದುಕೊಂಡೆ. ಮದ್ಯ ಹಾಳೆ ತೆರದಾಗ ಅವಳ ದುಂಡನೆಯ ಅಕ್ಷರಗಳು ಮಸುಕು ಮಸುಕಾಗಿ ಕಾಣಿಸಿತು. ಏನೊ ಯೋಚಿಸಿದವಳಂತೆ ಹಾಗೆ ಕಿತ್ತು ಒಲೆಗೆ ಹಾಕಿದಳು.
ಬೆಂಕಿ ಹಿಡಿಸಿದಳು ಜೋಡು ಪುಟಗಳು ಒಂದೊಂದರಂತೆ ಬೆಂಕಿಗೆ ಆಹುತಿಯಾಗುತ್ತಿತ್ತು.
ಸುತ್ತ ಕಟ್ಟಿಗೆಗಳಿಲ್ಲ ಇದ್ದಿದ್ದು ಯಾರೊ ಕುಡಿದು ಎಸೆದ ಎರಡು ಹಸಿ ಎಳೆನೀರನ ಸಿಪ್ಪೆ,ದೊಡ್ಡ ಬೆಂಕಿ ಪೊಟ್ಟಣ.
ಹೊಗೆ ಮೂರಂತಸ್ತಿನಲ್ಲಿದ್ದ ನನ್ನನ್ನು ಸಮಿಪಿಸುವ ವೇಳೆ ಸ್ವಲ್ಪ ಬೆಚ್ಚಗಾಗಿರಬೇಕು.ಅವಳು ಬಿಸಿಲಿಗೆ ಬೆಚ್ಚಗಾದಳು.ಮೈಮುರಿದು ಒಳನಡೆದಳು.
ಸರೋಜಮ್ಮನ ಸ್ವಚ್ಚತಾ ಕಾರ್ಯ ಮುಗಿತು ಅನ್ನಿಸುತ್ತಿದೆ ಮೊರದಲ್ಲಿ ಒಂದಿಷ್ಟು ಒಳಗಿಂದ ಕಸತಂದು ಒಲೆಗೆ ಅರ್ಪಿಸಿದಳು.ಹೋಮಕ್ಕೆ ಹಾಕಿದ್ದ ತುಪ್ಪದಂತೆ ದಟ್ಟ ಹೊಗೆ ಎದ್ದಾಗ ಅದೇ ಪ್ಲಾಸ್ಟಿಕ್ ಮೊರ ಹಿಡಿದು ಬೀಸಣಿಗೆಯಂತೆ ಗಾಳಿಯಾಡಿಸಿದಳು.
ಲಟಕ್ ಅದರ ಹಿಡಿ ಮುರಿದಿದೆ..ಇನ್ನು ಅದು ಖಾಯಂ ಒಲೆ ಪಕ್ಕನೆ..
ಮಾಲಿನಿ ಅವಾಗವಗ ಬಂದು ಪ್ಲಾಸ್ಟಿಕ್ ತೊಟ್ಟಿ ಪೆಪರ್ ತಂದು ಬೆಂಕಿಗೆ ಹಾಕುತ್ತಿದ್ದಳು.
ನನಗೆ ಆಶ್ಚರ್ಯ, ದೇಶ ತುಂಬ ಮುಂದುವರಿದಿದೆ.ಇಂದಿನ ದಿನದಲ್ಲಿ ಅದೆಷ್ಟು ಸೌಕರ್ಯ ಬಂದಿದೆ, ಗ್ಯಾಸ್ ಸಿಲಿಂಡರ್,ವಿದ್ಯುತ ಒಲೆ,ಸೌರ ಒಲೆ..ಅದ್ಯಾವದನ್ನು ಕರಿದಿಸಲಾಗದ ಜನ ಇನ್ನು ಇದ್ದಾರಾ...
ಹಳ್ಳಿಗಳಲ್ಲಾದರೆ ಯತೆಚ್ಚವಾಗ ಕಟ್ಟಿಗೆ ಸಿಗುವುದೆಂದು ಜನ ಸೌದೆ ಒಲೆ ಬಳಸುವುದು ರೂಡಿ.
ರಾಜ್ಯದ ರಾಜಧಾನಿ ಜನ ಹೀಗೆ ಕಷ್ಟಪಡುತ್ತಿದ್ದಾರೆ.ನೋಡದವರಿಗೆ ಆಶ್ಚರ್ಯ, ಪ್ರತಿದಿನ ನೋಡುತ್ತಿದ್ದವನಿಗೆ ಬೇಸರ.
ಅಷ್ಟಕ್ಕೂಆ ಒಲೆಯಲ್ಲಿ ಬೇಯುತ್ತಿರುವುದು ಏನು...ಪ್ರತಿದಿನವೂ ನನಗೆ ಅಸ್ಪಷ್ಟವಾಗಿತ್ತು..
ಈ ತಲಾಸ್ ನಲ್ಲೆ ಬೇಟಿಯಾದವಳು ಮಾಲಿನಿ..
ಅವಳಿಗಾಗಿ ಸದಾ ಹೊರಗಡೆ ಇಣುಕುತ್ತಿರುವುದು ಅವಳ ಗಮನಕ್ಕೂ ಬಂತೊಂದು ದಿನ.
ಸಂಜೆ ಇನ್ನು ಕತ್ತಲಾವರಿಸಿಲ್ಲ.ಹೊಟೆಲ್ ನಿಂದ ಸ್ವಲ್ಪ ಬೇಗನೆ ಬಂದಿದ್ದೆ. ತಲೆ ನೋವಿನ ಕಾರಣ ರೂಮ್ ನಲ್ಲಿ ಕೂರಲಾಗದೆ, ಬಾಲ್ಕಾನಿನಲ್ಲಿ ನಿಂತಿದ್ದೆ..ಅಲ್ಲೂ ಮನಸ್ಸಾಗದೆ ಟೆರೆಸ್ ಮೇಲೆ ಹತ್ತಿ ನೂರು ಮೈಲಿ ಕಣ್ಣಾಡಿಸಿದೆ.ಬರಿ ಕಟ್ಟಡಗಳ ಪ್ರಪಂಚದಲ್ಲಿ ನಾನೊಬ್ಬ ಒಂಟಿ ಅನಿಸತೊಡಗಿತು.ನೋಟ ಕಿರಿದಾಗಿಸಿ ಕೆಳ ನೋಡತೊಡಗಿದೆ.ಕಿಕ್ಕಿರಿದ ಜನವಸತಿಯ ಮದ್ಯ ಅರ್ಧ ಎಕರೆ ಜಾಗದಲ್ಲಿ ಎರಡು ತಗಡಿನ ಮಾಡಿನ ರೂಮುಗಳು ಅಲ್ಲೆ ಹುಲ್ಲು ಮೆಳೆಗಳಿಂದ ಹಸಿರಾಗಿ ಕಾಣುತ್ತಿತ್ತು.
ಮಾಲಿನಿ ಹೊರಗಡೆ ನಿಂತಿದ್ದರೂ ಮುಖತಃ ಬೇಟಿ ಮಾಡಿ ಮಾತಾಡುವ ಅವಕಾಶ ಸಿಕ್ಕಿರಲಿಲ್ಲ. ಪಾಪ ಅವಳ ಓರೆಗಣ್ಣಿನ ನೋಟಕ್ಕೆ ನನ್ನ ಎತ್ತರವನ್ನು ದಿಟ್ಟಿಸಲಾಗಲಿಲ್ಲ ಸುಮಾರು ಐವತ್ತು ಅಡಿ ಎತ್ತರದಲ್ಲಿ ನಾನಿದ್ದೆ.
ಅಕಸ್ಮಾತ ಆದ ಘಟನೆಯದು ಅಲ್ಲೆ ಹಸಿರು ಗಿಡಗಳ ಮದ್ಯ ಹಾವೊಂದು ಹರಿದಾಡುವುದು ನನ್ನ ಗಮನಕ್ಕೂ ಬಂತು.ಇನ್ನೇನು ಅವಳ ಸಮೀಪಿಸುತ್ತಿದೆ ಎನ್ನುವಷ್ಟರಲ್ಲಿ ನೇರ ಲಿಪ್ಟ್ ನಿಂದು ಇಳಿದು ಅವಳನ್ನು ಪಕ್ಕಕ್ಕೆ ಎಳೆದು ಕೊಂಡಿದ್ದೆ...ಇದೆ ಪರಿಚಯ ಮುಂದೆ ಸಂಬಂಧವಾಯ್ತು.
ಮರಾಠಿ ನನಗೆ ಅಷ್ಟಾಗಿ ಬರುತ್ತಿರಲಿಲ್ಲ ಅರ್ಧಂಬರ್ಧ ಹಿಂದಿಯಲ್ಲೆ ಸಂವಾದ ನಡೆಯುತ್ತಿತ್ತು.
ಅವರಿಗೂ ಯಾರು ಸಂಬಂಧಿಕರಿರಲಿಲ್ಲ ..ಅಮ್ಮ ಮಗಳು ಮಾತ್ರ ಆ ಮನೆಯಲ್ಲಿ. ನನಗೂ
ಪೂರ್ವಪರ ಜಾಸ್ತಿ ವಿಚಾರಿಸುವುದು ಅಗತ್ಯವೆನಿಸಲಿಲ್ಲ.
ಅಸಲಿಗೆ ನಾನು ಅವಳ ವಶವಾಗಿದ್ದೆ. ಒಬ್ಬಂಟಿ ಪಯಾಣದಲ್ಲಿ ನನ್ನವರನ್ನು ನಾನು ಹುಡುಕಿಕೊಂಡಿದ್ದೆ..
ಈ ನಾಲ್ಕು ವರ್ಷದಲ್ಲಿ ಎಲ್ಲಾ ಮುಚ್ಚಿಟ್ಟು ಸಂಸಾರ ಮಾಡುತ್ತಿದ್ದ ಪರಿಣಾಮವೇ ಇನ್ನೊಂದು ಮದುವೆ..
ಸಿಂಚನಾನ ಕೊರಳಿಗೆ ದಾರ ಬಿಗಿದಿದ್ದು.
ಊರಲೆಲ್ಲ ಅದೇ ಮಾತು..
ಎನೊ ಕೃಷ್ಣ ನಿನ್ನ ಅತ್ತೆ ಮಗಳು ಬಾಂಬೆ ಸಾವುಕಾರನ ಕೈ ಹಿಡಿದವಳಂತೆ.ಮಾದುವೆಗಾದ್ರು ಹೊದ್ಯೊ ಇಲ್ವೊ..
ಎಲ್ಲಿ ನಿಮ್ಮಪ್ಪನ ಬುದ್ದಿ ಬಿಡ್ತಿಯೋ ಎಂದು ಮೂದಲಿಕೆ ಮಾತುಗಳನ್ನಾಡುತ್ತಾ ನಾರಾಯಣ ವರ್ಮರು ತಾವು ಉಟ್ಟ ಗೇಣು ಪಂಚೆಯನ್ನು ಇನ್ನೆರಡು ಸುತ್ತು ತಿರುಗಿಸಿದರು.
ಅವರ ಬಗ್ಗೆ ಮನದಲ್ಲಿ ಅಸಹ್ಯ ಭಾವ ಮೂಡಿದರೂ ತೋರಿಸಿಕೊಳ್ಳದೆ
ಇಲ್ಲಾ ರಾಯರೇ..ಎಂದು ತಲೆಯಾಡಿಸಿದ್ದ.
ಎನ್ ಮಹಾರಾಯ ನಿಂಗೇನ್ ಕಮ್ಮಿ...ನಿನ್ನ ಮದುವೆ ಮಾಡ್ಕೊಂಡು ಊರಲ್ಲೆ ಇರಬಹುದಿತ್ತು.
ಅವರ ಚುಚ್ಚು ಮಾತಿಗೆ
ನಾರಾಯಣ ವರ್ಮರೇ ಮದುವೆ ಅನ್ನೊದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ. ಋಣವಿಲ್ಲದೆ ಏನು ನಡೆಯಲ್ಲ, ದೊಡ್ಡವರಾದ ನಿಮಗೆ ಇದು ತಿಳಿಯದೆ...
ಈ ಬಾರಿ ಸ್ವಲ್ಪ ಖಾರವಾಗಿ ನುಡಿದ ವೇದ ಕೃಷ್ಣ.
ಇಲ್ಲಿ ಹೃದಯವಂತು ಚೂರಾಗಿದೆ..ಮತ್ತೆ ಚೀರುವಂತೆ ಮಾಡಲು ತಾ ಮುಂದು ತಾ ಮುಂದು ಎಂದು ಮುನ್ನುಗ್ಗುವ ಭಾವನೆಗಳೆ ಸಾಕು..ಅದರಲ್ಲಿ ಈ ಮನುಷ್ಯ ಬೇರೆ,.ಉರಿಯುವ ಗಾಯಿಗೆ ಉಪ್ಪು ಸವರುತ್ತಿದ್ದಾನೆ.
ಅದರೂ ತನ್ನಲ್ಲೇನು ಕೊರತೆ ಕಂಡಿತು ಈ ಸಿಂಚನಾಳಿಗೆ...ದುಡ್ಡಿಗಾಗಿ ಹೋಗಿ ಹೋಗಿ ಪರದೇಸಿಯನ್ನು ಕಟ್ಟಿಕೊಂಡಳೆ...ಇರಲಿ ಬಿಡಿ ಅಲ್ಲಾದರೂ ಖುಷಿಯಾಗಿರಲಿ ಎಂದು ಅರೆ ಮನಸ್ಸಿನಲ್ಲೆ ಹಾರೈಸಿದನು.
ಮೊದಮೊದಲು ಸಿಂಚನ ಹೊರಗಡಿಯಿಡುತ್ತಿದ್ದಂತೆ ಎಲ್ಲ ರಹಸ್ಯಗಳು ಬಯಲಾಗಿದ್ದವು. ಮೂರ್ನಾಲ್ಕು ತಿಂಗಳಲ್ಲಿ ಹಿಂದಿಯ ಜೊತೆಯಲ್ಲಿ ಮರಾಠಿಯನ್ನು ಕಲಿತ್ತಿದ್ದಳು.ಪಕ್ಕದ ಮನೆಯವರ ಖಚಿತ ಮಾಹಿತಿಯ ಮೇರೆಗೆ ಮಾಲಿನಿಯ ಮನೆಗೆ ಬಂದಿದ್ದಳು.
ಅವರದ್ದು ಮದ್ದು ಹಾಕುವ ಮನೆ ನೀನೇನು ಅಲ್ಲಿ ತಿನ್ನೊದಾಗಲಿ ಕುಡಿಯೋದಾಗಲಿ ಮಾಡ್ಬೇಡಾ..ನಿನ್ನ ಗಂಡನ ಹೀಗೆ ವಶೀಕರಣಮಾಡಿ ಮದುವೆ ಮಾಡಿಕೊಂಡಿದ್ದಳು.
ಕೊಟ್ಟ ಟೀ ಕಪ್ ನ್ನು ಸಾವಧಾನವಾಗಿ ಟಿಪಾಯಿಯ ಮೇಲಿಟ್ಟಳು.
ನಾನು ದೀರವ್ ವೈಪ್ ಎಂದಾಗ ಮಾಲಿನಿ ಮೊಗದಲ್ಲಿ ಕೊಂಚವೂ ಬದಲಾವಣೆ ಕಾಣಿಸಲಿಲ್ಲ. ಅವಳಿಗೆ ವಿಷಯ ಮೊದಲೆ ತಿಳಿದಿರಬೇಕು..
ಅವಳ ನಡೆ ಒಂದಾಗಿ ಬಾಳುವ ಅನ್ನುವಂತಿತ್ತು
ನನ್ನ ಗಂಡನನ್ನು ನನಗೆ ಬಿಟ್ಟು ಕೊಡು ಎಂದಾಗ ಮಾತ್ರ ಕಣ್ಣು ಹುಬ್ಬು ಒಂದು ಮಾಡಿದ್ದಳು.
ನನಗೆ ಗಲಾಟೆ ಮಾಡಲು ಇಷ್ಟವಿಲ್ಲ, ನನ್ನ ಮಕ್ಕಳು ಮಲಗಿದ್ದಾರೆ ಎಂದು ಬಾಗಿಲು ಮುಚ್ಚಿ ಹೊರಕಳಿಸಿದ್ದಳು.
ಇಷ್ಟೆಲ್ಲ ರಾದ್ದಾಂತದ ನಡುವೆಯು ತನ್ನ ನೋವನ್ನು ಅಮ್ಮನಿಗಾಗಲಿ ,ತಮ್ಮನಿಗಾಗಲಿ ಹೇಳದೆ ಮರೆಮಾಚಿ ತಾನು ಸುಖವಾಗಿದ್ದೆ ಎನ್ನುವ ನಾಟಕ ಮಾಡುತ್ತಿದ್ದಳು.
ಮನೆಯ ಜ್ಯೋತಿ ಹೊರಹೋಗುತ್ತಿದ್ದಂತೆ ಮನೆಗೆ ಜ್ಯೋತಿ ಹಾಕಿಸಿದ್ದರು. ಮದುವೆಗೆ ಬಂದ ಮುಯ್ಯಿ ಹಣದಿಂದ ಹುಲ್ಲು ಮಾಡಿಗೂ ವಿದ್ಯುತ್ ದೀಪದ ಅಲಂಕಾರ.
ನಾಲ್ಕು ತಿಂಗಳ ಹಿಂದೆ ಅಳಿಯ ಬಂದಾಗ ತಂದಿದ್ದ ನಾಲ್ಕು ರೆಕ್ಕೆಯ ಪ್ಯಾನು, ಡೂಮ್ ಶೆಪ್ ನ ಟಿ.ವಿ. ಎರಡು ತಿಂಗಳು ಉರಿಸಿ ಬಿಲ್ ದುಬಾರಿಯಾಯಿತೆಂದು ಮೂರನೆ ತಿಂಗಳು ಶಾಲು ಹೊದಿಸಿ ಸನ್ಮಾನ ಮಾಡಿದ ರೀತಿ ಮೂಲೆಗಿರಿಸಿದ್ದರು.
ಮುಂಬಾಯಿಯಲ್ಲಿ ಅವಳಿಗೆ ನನ್ನ ಬಿಟ್ಟರೆ ಬೇರೆ ಅಸರೆ ಇಲ್ಲ.ಆದರೂ ಸ್ವಲ್ಪ ಭಯವಿದ್ದಿದಂತು ಖಂಡಿತ, ಏನಾದರೂ ಹೆಚ್ಚು ಕಮ್ಮಿ ಮಾಡಿಕೊಂಡರೆ...
ಅವಳ ಮನವೊಲಿಸಲಾಗಲಿಲ್ಲ, ಊರಿಗೆ ಕಳಿಸುವ ಪ್ರಯತ್ನವಂತು ವಿಫಲವಾಯ್ತು.
ಅವಳದೊಂದೆ ಹಟ ಬದುಕಿದ್ರು ಇಲ್ಲಾ ಸತ್ರು ಇಲ್ಲೇನೆ..ಈಗ ಎಲ್ಲಾ ಕಳೆಗುಂದುತ್ತ ಬಂದಿದೆ. ಮಾತಿಗೊಮ್ಮೆ ಬೇಸರದ ಜಗಳ ಸುಳಿದಾಡುತ್ತಿತ್ತು. ಸ್ವಾಭಿಮಾನ ಇಬ್ಬರಿಗೂ ತುಸು ಜಾಸ್ತಿನೇ..ಜೀವನದಲ್ಲಿ ಇಬ್ಬರೂ ಸೋಲೊಪ್ಪಲಾರರು.
ಒಂದು ದಿನ ಕುಡಿದ ಮತ್ತಿನಲ್ಲಿ ದೀರವ್ ಏನೆನೊ ಬಯ್ದು ಬಿಟ್ಟಿದ್ದ. ಅಷ್ಟಕ್ಕೆ ಸಾಡಟಿವ್ ಸ್ಲೀಪಿಂಗ ಟ್ಯಾಬ್ಲೇಟ್ ತಿಂದು ಮಲಗಿದ್ದಳು.
ಪಾಪ ಹುಡುಗಿಯ ಹುಚ್ಚಾಟಕ್ಕೆ ಏನು ಅರಿಯದ ಭ್ರೂಣ ಮಡಿಲಿಗೇರದೆ ಮಡಿಯಬೇಕಾಯಿತು...
ಅವಳೂ ತವರೂರ ಹಾದಿ ತುಳಿಯಬೆಕಾಯಿತು..
ಸುಮಾರು ವಯಸ್ಸು ನಲವತ್ತು ...ನಲವತೈದು ಆಗಿರಬಹುದು. ಅಲ್ಲಲ್ಲಿ ಬಿಳಿ ಕೂದಲು ವಯಸ್ಸನ್ನು ಅಂದಾಜಿಸಲೆಂದೆ ಹುಟ್ಟಿಕೊಂಡವು. ನೀಟಾಗಿ ಶೇವ್ ಮಾಡಿದ ಕೆನ್ನೆಯ ಮೇಲೆ ಅಲ್ಲೊಂದಿಷ್ಟು ನೆರಿಗೆಗಳು,ಕನ್ನಡಕದ ನೇರಕ್ಕೆ ದೃಷ್ಟಿ, ಅವನ ಮಾತುಗಳು ಖಡಕ್ ಆಗಿದ್ದವು.
ಹುಡುಗಿಗೆ ಇನ್ನು ಚಿಕ್ಕ ವಯಸ್ಸು , ಬೇರೆ ಸಂಬಂಧ ನೋಡಿ..ಹಾಗಂತ ನನಗೆ ಇಷ್ಟವಿಲ್ಲ ಅಂತಲ್ಲ.ಅವಳಿಗೂ ಆಸೆಗಳಿರುತ್ತದೆ..ಹುಡ್ಗಿನು ಒಂದ ಮಾತು ಕೇಳಿ ಅವಸರ ಬೇಡ..
ಜೆಂಟಲ್ ಮ್ಯಾನ್ ನ ನುಡಿಗಳಿಗೆ ಅದಾಗಲೇ ಮನೆಯವರ ಒಪ್ಪಿಗೆ ಸಿಕ್ಕಿತ್ತು. ಆದ್ರೂನು ಖುದ್ದಾಗಿ ಹುಡುಗಿಯ ಮನದಿಚ್ಚೆಯ ಮಾತು ಅವನಿಗೆ ಬೇಕಾಗಿತ್ತು.
ಅವಳ ಜೊತೆ ಮಾತಾಡೊಕೆ ಅಂತನೆ ದೇವಸ್ಥಾನಕ್ಕೆ ಬಂದಿದ್ದರೂ ಅವಳೇನು ಮಾತಾಡಿರಲಿಲ್ಲ.
ಅವಳು ಮನಸ್ಸಿಲ್ಲದ ಮನಸ್ಸಲ್ಲಿ ಒಪ್ಪಿಗೆ ಸೂಚಿಸಿದ್ದರೂ ಅದಕ್ಕೆ ಕುಂದು ಬಾರದಂತೆ ನಡೆದು ಕೊಂಡಿದ್ದಳು.ಇದನ್ನು ಆ ಮಹಾನುಭಾವ ಉಹಿಸಲಾಗಲಿಲ್ಲ.. ಇಂದು ಅವಳ ಮಾರ್ಗ ಅಸಹಯಾಕತೆಯಿಂದ ಕೂಡಿತ್ತು.
ಇಲ್ಲಿ ನಮ್ಮ ಲೆಕ್ಕಚಾರದಂತೆ ಏನು ನಡೆಯದು. ಬದುಕು ಬಂದಂತೆ ಸ್ವೀಕರಿಸುವುದು ಬುದ್ದಿವಂತಿಕೆ ಅಷ್ಟೇ..
ಎರಡನೆಯ ಮದುವೆ ವಿಷ್ಯ ಬಂದಾಗ ಯಾರ ಮಾತು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ.ಅದರ ಕಲ್ಪನೆಯು ಅವಳಿಗಿರಲಿಲ್ಲ.. ಕಳೆದ ಮೂರುವರೆ ವರ್ಷ ಅವನಿಗಾಗಿ ಕಾದಿದ್ದಳು..ಕೇವಲ ಆರು ತಿಂಗಳ ಹಿಂದಷ್ಟೇ ಮನಸ್ಸು ಬದಲಾಯಿಸಿದಳು..ಇಂದು ಎಲ್ಲವೂ ಮುರಿದು ಬಿದ್ದಿದೆ. ಕೇವಲ ಕಾನೂನಿಗೆ ಅನ್ವಹಿಸುವಂತೆ ಡೈವರ್ಸ ಪೇಪರ್ ಗೆ ಸಹಿ ಅಷ್ಟೇ ಬಾಕಿ.
ಅವನ ಕೂಸನ್ನು ಅವಳು ಜೋಪಾನ ಮಾಡಿದಳು.
ಅವನಿಗಲ್ಲದಿದ್ದರೂ "ಅವನಿ"ಗಾಗಿ ಅವಳ ಮುದ್ದು "ಅವನಿ"ಗಾಗಿ
ಇಂದು " ಅವನಿ" ಮಾತ್ರ ಅವಳ ಪ್ರಪಂಚ.ಅವಳಿಗಾಗಿ ಮನಸ್ಸು ಕಲ್ಲು ಮಾಡಿಕೊಂಡಿದ್ದಳು, ನಿರ್ಧಾರ ತೆಗೆದು ಕೊಂಡಿದ್ದಳು.
************
ಘಂಟೆ ಮೂರು ಮೂವತ್ತು ಅರ್ಧ ಬಾಟಲ್ ಗ್ಲೂಕೋಸ್ ದೇಹ ಸೇರಿತ್ತಷ್ಟೇ ಒಂದು ಅಂದಾಜಿನ ಪ್ರಕಾರ ಸಂಜೆ ಐದರ ಹೊತ್ತಿಗೆ ಶ್ರೀಕಾಂತ ಬಂದು ಮನೆಗೆ ಕರೆದುಕೊಂಡು ಹೋಗುವನು.
ಅಬೋಷನ್ ಆದಗಿನಿಂದ ರಕ್ತ ಸ್ರಾವವಾಗಿ ತುಂಬ ಸುಸ್ತಾಗುತ್ತಿತ್ತು. ಪ್ರತಿವಾರ ಗ್ಲೂಕೋಸ್ ಹಾಕಿಸಿಕೊಳ್ಳಲು ಒಂದು ತಿಂಗಳಿಂದ ಅಮ್ಮನ ಜೊತೆ ಬರವಳು. ಇಂದೊಬ್ಬಳೆ ಬಂದಿದ್ದರಿಂದ ಎಲ್ಲದಕ್ಕೂ ನರ್ಸ್ ನ ಅವಲಂಬಿಸಿದ್ದಳು.
ಅವಳು ಸಿಂಚನಾ ಅಲ್ವ ....
ಹೌದು ಜೊತೆಯಲ್ಲಿ ಯಾರು ಇಲ್ಲ..ಮಲಗಿದ್ದಲ್ಲೆ ಕೈ ತಡಕಾಡಿದಳು.ಪ್ಲಾಸ್ಟಿಕ್ ಕವರೊಂದು ಜಾರಿ ಬೆಡ್ ನಿಂದ ಕೆಳ ಬಿದ್ದಗ ಎತ್ತಿಕೊಟ್ಟ ವೇದ ಕೃಷ್ಣ..
ಅವಳ ದುರಂತದ ಕಥೆ ಕೇಳಿ ಅವನು ತುಂಬ ನೊಂದು ಕೊಂಡಿದ್ದ.
ಅವನ ಸಾಂತ್ವನದ ಮಾತಿಗೆ ಸುಮ್ಮನೆ ನಸುನಕ್ಕಿದ್ದಳು.ಅವನಿದ್ದಷ್ಟು ಹೊತ್ತು ಹಳೆಯದನ್ನೆಲ್ಲ ಮರೆತಿದ್ದಳು.ಮನೆಗೆ ಹೊರಡುವಾಗ ಶ್ರೀಕಾಂತ ಸ್ವಲ್ಪ ಲೇಟಾಗಿ ಬರಬಾರದಿತ್ತೆ ಅಂದು ಕೊಂಡೆ ಆಟೊ ಹತ್ತಿದಳು.
ಎಲ್ಲ ಮಾಮೂಲಾಗಲು ಎರಡು ತಿಂಗಳಾಯಿತು.
ದೀರವ್ ಸಹ ಬಂದಿದ್ದ , ರಾಜಿ ಪಂಚಾಯಿತಿ ಎಲ್ಲಾ ಮುಗಿದ ಮೇಲೆ ಇಬ್ಬರೂ ಆ ನಿರ್ಧಾರ ಒಪ್ಪಲೇ ಬೇಕಾಯಿತು.
ಅವಳು ಊರಲ್ಲೆ ಇರಲಿ ಅವಳ ಖರ್ಚು ವೆಚ್ಚ ಅವನೇ ಭರಿಸಬೇಕು..
ಹಣವೇನು ತಿಂಗಳು ತಿಂಗಳು ಬರುತ್ತಿತ್ತು.ಅದರೆ ಗಂಡನ ಪ್ರೀತಿಯಿಂದ ವಂಚಿತಳಾಗಿದ್ದಳು.
ಅವನಿಗೊಂದೆ ಸಿಟ್ಟು ತನ್ನ ಬಂಡವಾಳ ಎಲ್ಲರೆದುರು ಬಯಲಾಯಿತು..
ಅವಳ ಆ ತಪ್ಪಿಗೆ ತಾನು ಬದಲಾಗುವರೆಗೆ ಕಾಯಿತಿರು.ಅಲ್ಲಿ ತನಕ ಕೊರಗುತಿರು ಎಂದು ಹೇಳಿದ್ದ.
ಅವಳು ಪ್ರತಿ ದಿನ ದೇವರ ಬೇಡುತ್ತಿದ್ದದೊಂದೆ..ಹತ್ತಾರು ದೇವಸ್ಥಾನ ಸುತ್ತಿದಾಯ್ತು.. ಇಂದು ಅವನ ಒಲಿಸಿಕೊಳ್ಳಲು ಬ್ಲಾಕ್ ಮ್ಯಾಜಿಕ್ ಅಂದ್ರೆ ಭಾನುಮತಿಯ ಮೊರೆ ಹೋಗಿದ್ದಳು.
ಎಲ್ರು ದುಡ್ಡು ಕಿತ್ಕೊಂಡವರೇ ಯಾವುದು ಪರಿಣಾಮ ಬೀರಿದ್ದಿಲ್ಲ.
ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡವರು ಒಂದಷ್ಟು ಜನವಾದರೆ ನಂಬಿ ಕೆಟ್ಟವರು ಬಹಳ ಮಂದಿ. ಈ ವಶೀಕರಣ,ಮಾಟ,ಮಂತ್ರ ಯಾವುದೋ ಕಾಲದಿಂದ ಇಂದಿನವರೆಗೂ ಜನರ ಮನಸ್ಸಲ್ಲಿ ಉಳಿದು ಬಂದಿದೆಯೆಂದರೆ ಕಾರಣ ಭಯ.. ಮೂಢ ಭಯವಷ್ಟೆ.
ಅವಳ ಒಳಿತಿಗಾಗಿ ಪ್ರಯತ್ನಿಸಿದವರು ತುಂಬ ಜನ..ಪಾಪ ಅವಳ ಹಣೆಬರಹವೇ ಅಷ್ಟೆ ಯಾರಿಂದಲೂ ಬದಲಾಯಿಸಲಾಗದ್ದು.
ತನ್ನ ಮಗಳಿಗೆ ಒಂದು ಮಗುವಾದರೆ ..
ಆ ಮಗುವಿಗಾದ್ರು ಅಳಿಯ ಮಗಳು ಕೂಡಿ ಬಾಳಬಹುದು.
ಐಡಿಯಾ ಎನು ಚೆನ್ನಾಗಿದೆ ಅದ್ರೆ ಕಾರ್ಯರೂಪಕ್ಕೆ ತರೊದು ಸ್ವಲ್ಪ ಕಷ್ಟ...
ಅವರು ಮಹನ್ ಜ್ಯೋತಿಷ್ಯ ಶಾಸ್ತ್ರಜ್ಞರು, ವೇದ ಪುರಾಣ ಕರಗತ ಪಂಡಿತರು ಪೂಜಾ ಕೈಂಕರೆಗಳಿಂದ ಊರಲ್ಲಿ ಪ್ರಸಿದ್ದರಾದವರು.
ಸಿಂಚನಾ ಇತ್ತೀಚೆಗೆ ಪ್ರತಿ ಶುಕ್ರವಾರ ಪೂಜಾ ಮಾಡಿಸುತ್ತಿದ್ದಳು..ಅವರಿಂದ ಹೇಳಿಸಿದರೆ.
ಅರ್ಚಕರ ಮನಸಾಕ್ಷಿ ಶ್ರೀಕಾಂತನ ಮಾತು ಮೊದಲು ಒಪ್ಪಲಿಲ್ಲ..ಹೀಗೆಲ್ಲ ಮಾಡಿದರೆ ಶಾಸ್ತ್ರಕ್ಕೆ ಸುಳ್ಳಾಡಿದಂತಾಗಿ ಪಾಪಾ ಪ್ರಜ್ಞೆ ಸದಾ ಕಾಡುತ್ತಿರುತ್ತದೆ.
ಕೈಯಿಂದ ಜಾರಿದ ಕವಡೆ ನಾಲ್ಕು ದಿಕ್ಕುಗಳಲ್ಲೂ ಬಿಡಿ ಬಿಡಿಯಾಗಿ ಬಿದ್ದಿದ್ದವು..ಬ್ರಾಹ್ಮಣೊತ್ತಮರು ಕಣ್ಣು ಮಿಟುಕಿಸಿ ಹೇಳಿದರು..ನಿನಗೆ ಸಂತಾನಭಾಗ್ಯವಿದೆ...ಪುತ್ರ ಪ್ರಾಪ್ತಿಯಿಂದ ಸಕಲ ಕಷ್ಟಗಳು ಕರಗಿ ನೀರಾಗುವುದು..ಎಲ್ಲ ಒಳಿತಾಗುವುದು.ಇದರಲ್ಲಿ ನಿನ್ನ ಪ್ರಯತ್ನ ಮಹತ್ವವಾದುದು.
ಇಷ್ಟೆಲ್ಲಾ ಸಂಕಷ್ಟದಲ್ಲೂ ಅವಳು ತಾಯಿಯಾದಳು.ಪುತ್ರನ ಬದಲಿಗೆ ಪುತ್ರಿಯ ಹಡದಿದ್ದಳು.ಮಗುವನ್ನು ಕಾಣುವ ಬಯಕೆಯಿಂದ ದೀರವ್ ಬಾಂಬೆಯಿಂದ ಊರಿಗೆ ಹೊರಟಿದ್ದ. ಕಾರ್ ಎಕ್ಸಿಡೆಂಟ್ ಆಗಿ ಮೋರಿ ಮರೆಗೆ ಬಿದ್ದವನ ಅದ್ಯಾರೋ ಆಸ್ಪತ್ರೆ ದಾಖಲಿಸಿದರು.ಎಡಗಾಲಿನ ಮೊಣಕಾಲಿನಿಂದ ಕೆಳಗೆ ರಾಡ್ ಅಳವಡಿಸಲಾಗಿತ್ತು.
ಇದೆಲ್ಲ ಕಾರಣಕ್ಕೂ ಮಗು ಅವನಿಗೆ ಅಪಶಕುನದ ವಸ್ತುವಾಯ್ತು. ಮೊದಲು ಸಿಂಚನ ಈಗ ಅವನಿ ಇವರಿಬ್ಬರು ತನ್ನ ಅವನತಿಗೆ ಕಾರಣವೆಂದು ನಂಬಿ ಹೋಗಿದ್ದ.
ಅವನ ಮನದಲ್ಲಿ ಇಬ್ಬರ ಬಗ್ಗೆ ಕಿಂಚಿತ್ತು ಆಸೆಯಾಗಲಿ,ಪ್ರೀತಿಯಾಗಲಿ ಮೂಡಲೇ ಇಲ್ಲ.
ಇಂದು ನನ್ನ ಬಾಳಿಗೆ ಅರ್ಥ ನೀಡಲು ಮಹಾನುಭಾವನೊಬ್ಬ ಮುಂದೆ ಬಂದಿದ್ದ ..ಮಗಳು ಅವನಿಗೆ ತಂದೆ ಸ್ಥಾನ ನೀಡಲು ಅವನು ಸಿಧ್ದನಿದ್ದ. ಹೇಗಿದ್ದರೂ ನನ್ನದು ಮುಗಿದ ಬಾಳು , ಅವನಿಯ ಭವಿಷ್ಯ ಕಣ್ಮುಂದೆ ಬಂತು. ಒಪ್ಪಿಗೆಯಂತು ನೀಡಿದ್ದಾಯ್ತು..ಅವನ ಮೇಲೆ ಗೌರವ ಭಾವನೆ ಹೆಚ್ಚಾಯಿತೇ ಹೊರತು ಪ್ರೀತಿ ಮೂಡಲಿಲ್ಲ.
ಮನಸ್ಸೇಕೊ ಅವನಿಗೆ ಶರಣಾಗುತ್ತಿಲ್ಲ..
ಅದೆಷ್ಟೋ ಅಪ್ಪುಗೆಯ ನಂತರವೂ ಆ ಬಂಡೆ ಸ್ಥಿರವಾಗಿದೆಯೆಂದರೆ ಅಲೆಗಿರುವ ಪ್ರೇಮ, ಆ ದುಂಡು ಕಲ್ಲಿಗೆ ದಂಡವಾಗಿ ಹೋಯಿತೇ? ಇಲ್ಲಾ ಇನ್ನೆನನ್ನೊ ಬಯಸಿ ಅಡ್ಡನಿಂತಿರುವ ಬಂಡೆಯನ್ನು ದಾಟಲಾಗದೆ ಹಿಂದೆ ಸರಿಯುತ್ತಿದೆಯೇ?
ಪ್ರೀತಿಯೆಂದರೆ ಹೀಗೆ
ಅಲೆಯ ಅಲೆದಾಟವೋ. ಬಂಡೆಯ ಜಡತ್ವವೋ.
ಉತ್ಕಟ ಉತ್ಕರ್ಷದಲ್ಲಿ
ಆರ್ಭಟಿಸಿದ ಝರಿಯು ಸೌಮ್ಯವಾಗಿ ಹಾಲ್ನೊರೆಯಲಿ ಹರಿದಿದ್ದು ಸಹ ನೋಡಿದೆ.
ತನಗೂ ಇದಕ್ಕೂ ಸಂಬಂಧವೇ ಇಲ್ಲಾ ಎನ್ನುವಂತೆ ನಿಶ್ಚಲವಾಗಿ ನಿಂತ ಬಂಡೆ ಕಲ್ಲಿನ ಜೀವನವೂ ಸೋಜಿಗವೇ..
ಉಳಿಸಿಕೊಳ್ಳಲಾಗದ ಯಾವ ಬಂಧಗಳಿಗೂ ಭಾವನೆಯನ್ನು ಬೆಸೆಯಬಾರದು.ಕಳೆದುಕೊಂಡು ಪರಿತಪಿಸಿ ಹಾರೈಸುವ ಆ ಮನದ ನೋವು ಇನ್ನೊಬ್ಬರನ್ನು ನೆಮ್ಮದಿಯಾಗಿ ಇರಿಸಲಾರದು. ತಾಳ್ಮೆಯ ಈ ಪರಿ ಕೆಲವೊಮ್ಮೆ ಅಸಹನೀಯ ಎನಿಸಿದರೂ ಪವಿತ್ರ ಪ್ರೇಮದ ಮುಂದೆ ಎಲ್ಲವೂ ಗೌಣ.
ಮುಂಗೈಯನ್ನು ಕುರ್ಚಿಯ ಕೈಗೆ ಆನಿಸಿ ಎರಡು ಬೆರಳುಗಳಿಂದ ಹುಬ್ಬನ್ನು ಒಂದುಗೂಡುವಂತೆ ಉಜ್ಜಿ ಅದೆಷ್ಟು ಯೋಚಿಸಿದರೂ ಯಾವುದೇ ಸ್ಥಿರ ನಿರ್ಧಾರಕ್ಕೆ ಬರಲಾಗಲಿಲ್ಲ.
ಎದೆಯಾಳದಿಂದ ಏಳುವ ನೋವಿನ ಅಲೆಗಳು
ಕಣ್ಣವೆಯಲ್ಲಿ ಉಕ್ಕಿಸುವುದು ಬರಿ ನೀರಲ್ಲಾ..
ಹೆಪ್ಪುಗಟ್ಟಿದ ಭಾವಗಳನ್ನ
ಮುಪ್ಪಾದರು ವಾಸಿಯಾಗದ ನೋವನ್ನ
ಸುಪ್ತ ಹೃದಯದ ಆರ್ದ್ರತೆಯನ್ನ.
ಒಣ ಮನಸ್ಸಿನ ಅಸಾಹಯಕ ಅಳಲನ್ನ
ಒತ್ತರಿಸಿ ಬಿಕ್ಕಳಿಸುವ ದುಃಖವನ್ನ...
ಕುಸಿದಿದ್ದ ಅವಳನ್ನು ಹಸಿದಿದ್ದ ಅವನಿ ಅತ್ತು ಕರೆದಿದ್ದಳು.. ಎದೆಹಾಲು ನೀಡುತ್ತಿದ್ದವಳನ್ನು ಕಾಲಿಂದ ಒದ್ದು ತರಾಟೆಗೆ ತೆಗೆದುಕೊಂಡಗ ಮಾತ್ರ ಬಾಹ್ಯ ಪ್ರಪಂಚದ ಸುಖ ಅನುಭವಿಸಿದಳು.
ಬಾವನೆಗಳ ತಿಕ್ಕಾಟದಲ್ಲಿ ಸಿಂಚನಾ ರೋಸಿ ಹೋಗಿದ್ದಳು. ತಲೆ ಸಿಡಿದೆ ಹೋಗುವಂತ ತಲೆನೋವಿಗೆ ಅಮ್ಮ ತಂದಿಟಿದ್ದ ಹಾಲಿಲ್ಲದ ಕಡು ಕಪ್ಪಿನ ಟೀ ತುಟಿಗೇರಿಸಿ ಎರಡು ಸಿಪ್ ಚಪ್ಪರಿಸಿದಳಷ್ಟೇ..
" ಸಿಂಚು ಅವರು ಮದುವೆಗೆ ಒಪ್ಪಿದರಾ?
ನೀನೇನು ಅಡ್ಡ ಮಾತಾಡಿಲ್ಲ ತಾನೆ?
ಅವರೇನು ಕೇಳಿದರು?"
ಹೀಗೆ ಒಂದರ ಮೇಲೊಂದರಂತೆ ಪ್ರಶ್ನೆ ಕೇಳುತ್ತಿದ್ದರೆ ಸಿಂಚು ಮೌನಿಯಾಗಿದ್ದಳು.
ಅಮ್ಮನ ಸ್ವರ ಸ್ವಲ್ಪ ಜೋರಾದಗ..
"ನಾನು ಒಪ್ಪಿದ್ದಿನಿ ಅವರೂ ಒಪ್ಪಿದ್ದಾರೆ ಮದುವೆ ಮಾಡ್ಸೊಕೆ ರೆಡಿಯಾಗಿ" ಎಂದು ಒಳ ನಡೆದಳು.
ಸುಧಾಕರ್ ಗೆ ಅವಳು ನೀಡಿದ್ದು ಒಲ್ಲದ ಮನಸ್ಸಿನ ಒಪ್ಪಿಗೆ ಅಂತ ಅನಿಸಿರಲಿಲ್ಲ..ಅವನು ಕೇಳಿದ ಎಲ್ಲಾ ಪ್ರಶ್ನೆಗೂ ಅವಳು ಯೋಚಿಸಿಯೇ ಉತ್ತರಿಸಿದ್ದಳು. ಸುಮನ ಕಳೆದುಕೊಂಡು ಇಷ್ಟು ವರ್ಷ ಕಳೆದರೂ ಮದುವೆಯ ಬಗ್ಗೆ ಯಾವ ಆಸೆಯು ಇದ್ದಿರಲಿಲ್ಲ.. ಮೂರು ತಿಂಗಳ ಹಿಂದೆ ಡೆಂಗ್ಯೂಗೆ ತುತ್ತಾಗಿ ಅಸ್ಪತ್ರೆಯ ಬೇಡ್ ಮೇಲೆ ಕಳೆದ ಹದಿನೈದು ದಿನಗಳು ..
ಆ ಹದಿನೈದು ದಿನಗಳೇ ಇಂದು ಒಂಟಿತನದ ನೆನಪು ಮೂಡಿಸಿದ್ದವು.
ಅತ್ತ ಓದನ್ನು ಮುಂದುವರಿಸಲಾಗದೆ.ಇತ್ತ ಒಳ್ಳೆಯ ಕೆಲಸವೂ ಸಿಗದೆ, ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಶ್ರೀಕಾಂತ, ಮಕ್ಕಳು ಎದೆಯೆತ್ತರಕ್ಕೆ ಬೆಳೆದು ನಿಂತರೂ ನೆಮ್ಮದಿ ಕಾಣದ ತಾಯಿ..ಗಂಡನಂತೆ ಬಂದು ಬದುಕು ಹಿಂಡಿದ ದೀರವ್,ಇಂದಿಗೂ ಎದೆಯಲ್ಲಿ ಪ್ರೀತಿ ಬಚ್ಚಿಟ್ಟುಕೊಂಡ ಮುದ್ದು ಕೃಷ್ಣ, ಗೌರವ ಘನತೆ ನೀಡಲು ಮುಂದೆ ಬಂದ ಮಹಾನುಭಾವ ಸುಧಾಕರ್. ಹಾಲುಗಲ್ಲದ ಬಟ್ಟಲುಗಣ್ಣಿನ ಪೋರಿ ಅವನಿ.. ಹೀಗೆ ಎಲ್ಲರ ಮುಖ ಮೂಡಿ ಮರೆಯಾಗುತ್ತಿದ್ದರೆ.ಈ ಜಗತ್ತೆ ಒಂದು ನಾಟಕರಂಗದಂತೆ ಭಾಸವಾಗುತ್ತಿತ್ತು.ಅಲ್ಲೆ ನಿದ್ದೆ ಮಂಪರಿಗೆ ಜಾರಿದಳು.
ಕತ್ತಲು ಕವಿದು ಬೆಳಕು ಹರಿದು ಹಕ್ಕಿಗಳ ಇಂಚರ ದುಂಬಿಗಳ ಝೇಂಕಾರ ಎಲ್ಲಾ ಮುಗಿದು ಭೂಮಿ ತಾಪ ಏರುತ್ತಿತ್ತು.
ಗಾಳಿಗೆ ಈಚಲು ಮರದ ಗರಿಗಳು ಓಲೈಸುತ್ತಿದ್ದವು..ಹೊರಗಡೆ ಒಲೆಯಲ್ಲಿ ಎಸರಿಗಿಟ್ಟ ನೀರು ಬಿಸಿಲಿಗೆ ಕುದಿಯುತ್ತಿದ್ದ ಹಾಗೆ ಸೂರ್ಯನ ತಾಪ. ಮದ್ಯಾಹ್ನ ಊಟಕ್ಕೆ ನಾನಿಲ್ಲಾ ದೇವಸ್ಥಾನಕ್ಕೆ ಹೊರಟಿರುವೆ ಎಂದಿದ್ದಕ್ಕೆ ಮಡಿಕೆಗೆ ಎರಡು ಹಿಡಿ ಅಕ್ಕಿ ಕಮ್ಮಿ ಬಿತ್ತು.
ಹಂಚಿನ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಶ್ರೀಕಾಂತಗೆ ಇನ್ನೆರಡು ವರ್ಷದಲ್ಲಿ ಪರ್ಮನೆಂಟ ಮಾಡುವ ಭರವಸೆ ಸಿಕ್ಕಿದ್ರಿಂದ ಮದುವೆ ಬಗ್ಗೆ ಮನಸ್ಸು ಮಾಡಿದ್ದು ಸಹಜ. ಅಕ್ಕನ ಬಗ್ಗೆ ಸಿಟ್ಟು ತಾತ್ಸರ ಏನಿದ್ದರೂ ಒಳಗೊಳಗೆ.. ಮುಕ್ತಿ ಸಿಗದ ಆತ್ಮ ಅವನೊಳಗಿತ್ತು.
ಸಿಂಚು ಹೋಗುವಾಗ ಶ್ರೀಕಾಂತನಿಗೆ ಊಟ ಕೊಟ್ಟುಬಿಡು ಎಂದು ದೈನೆಂದಿನ ತಮ್ಮ ಜವಾಬ್ದಾರಿಯನ್ನ ಮಗಳಿಗೆ ವಹಿಸಿ ನೆರಮನೆ ಕಡೆ ಪ್ರಯಣ ಬೆಳಸಿದರು.
ಸಿಂಚು ಹುಗ್ಗದ ತುಂಬ ಹುಗ್ಗಿ ತುಂಬಿದಂತೆ ಎರಡು ಸೌಟು ಅನ್ನದ ಜೊತೆ ಸಾರು ಸೇರಿಸಿ..ಗೊರಟು ಮಾವಿನಕಾಯಿ ಸೈಡಲಿರಿಸಿ..ಟಿಪಾನ್ ಬಾಕ್ಸ ರೆಡಿಮಾಡಿ ವಾಚ್ ಮ್ಯಾನ್ ಕೈಗೆ ಕೊಟ್ಟು ದೇವಸ್ಥಾನದ ಕಡೆ ನಡೆದಳು.
No comments:
Post a Comment