Wednesday, 20 March 2024

ನನ್ನಾಕೆ

 ನನ್ನಾಕೆ


ಗುಳಿ ಕೆನ್ನೆ ಹುಡುಗಿ ನನ್ನಾಕೆ ಬೆಡಗಿ
ನಕ್ತಾಳೆ ನೋಡಿ ಕಣ್ಸನ್ನೆ ಮಾಡಿ
ಒಲವಲ್ಲೆ ಸೆಳೆದು ನೋವೆಲ್ಲ ಕಳೆದು
ಹಂಚತ್ತಾಳೆ ಪ್ರೀತಿಯ ಹನಿಹನಿಯಾ

ಅವಳೊಂದು ಸುಂದರ ನೆನಪು
ಅವಳಿಂದ ಮುಂದಿನ ಬದುಕು
ಅವಳಿಗೆ ನನ್ನಯ ಪ್ರೀತಿಯು ಮುಡಿಪು

ಎಲ್ಲಿ ಮೂಡಿತೊ ಪ್ರೀತಿ. ಹೇಗೆ ಹಬ್ಬಿತೋ ನಾಕಾಣೆ..
ಪ್ರೀತಿ ಮೂಡಿದ್ದು ನಿಜ ಹಬ್ಬಿದ್ದು ನಿಜ ನಿನ್ನ ಚೆಲುವಿನಾಣೆ.
ಸಂಚು ಮೂಡಿಸಿದೆ ನಿನ್ನ ಕಣ್ಣಂಚಲಿ
ಕೊಲ್ಮಿಂಚು ಬರಸೆಳೆದಿದೆ ನಿನ್ನ ಸಂಚಲಿ
ಬೇಗ ಬರು ಗೆಳತಿ ಬಾಳಲಿ....
   


ಕನ್ನಡ ಸಿನಿಮಾ ಮತ್ತು ಕನ್ನಡ ಸಂಸ್ಕ್ರತಿ

ಒಂದು ಭಾಷೆ ಹಾಗೂ ಅಲ್ಲಿನ ಸಂಸ್ಕ್ರತಿ ಎರಡೂ ವಿಭಿನ್ನವಾದುದು. ಒಂದು ಭಾಷೆ ಆ ಸಂಸ್ಕ್ರತಿಯ ಮೇಲೆ ಹೆಚ್ಚಿನ ಪ್ರಭಾವ ಬೀರದು.ಆದರೆ ಅಲ್ಲಿನ ಸಂಸ್ಕ್ರತಿ ಭಾಷೆಯಲ್ಲಿ ಬಿಂಬಿತವಾಗುವುದು.

ಸಂಸ್ಕ್ರತಿಯೆನ್ನುವುದು ನಾಗರೀಕತೆಗೆ ಸಂಬಂದಿಸಿದ್ದು.ಒಂದೇ ನಾಗರೀಕತೆಯಲ್ಲಿ ನಾನಾ ಭಾಷೆಗಳನ್ನಾಡುವ ಜನರಿದ್ದಾರೆ. ಕೇವಲ ಕನ್ನಡ ಸಂಸ್ಕ್ರತಿಯೆಂದು ಕರೆಯುವುದು ಸಂಕೀರ್ಣ ಪದವಾಗಬಹುದು. ಭಾರತೀಯ ಸಂಸ್ಕ್ರತಿಯಲ್ಲಿ ಕನ್ನಡದ್ದು ಪಾಲುದಾರಿಕೆಯಷ್ಟೇ.

ಸಾಹಿತ್ಯವೆನ್ನುವುದು ಸಂಸ್ಕ್ರತಿಯನ್ನು ಉತ್ತುಂಗಕ್ಕೇರಿಸುವ ಕೆಲಸ ಮಾಡುವುದರಿಂದ ಕನ್ನಡ ಸಿನಿಮಾ ಕ್ಷೇತ್ರವು ತನ್ನ ಕೊಡುಗೆಯನ್ನು ಸಹ ನೀಡಿದೆ.
ಅದರೆ ಇತ್ತಿಚಿನ ಕನ್ನಡ ಸಿನಿಮಾ ಪರದೆಯ ಮೇಲೆ ಇಣುಕಿ ನೋಡಿದರೆ ಭಾಷೆಯ ಗೌರವ ಹೆಚ್ಚಿಸುವ ಕೆಲಸ ಮಂದಗತಿಯಲ್ಲಿ ಸಾಗಿದಂತೆ ಕಾಣುತ್ತಿದೆ.

ಸಿನಿಮಾದಲ್ಲಿರುವ ಸಾಹಿತ್ಯ ಕಥೆಗೆ ಪೂರಕವಾಗಿರತ್ತದೆ.ಕಥೆ ಒಂದು ನಿರ್ದಿಷ್ಟ ಸಂದೇಶವನ್ನು ಪ್ರೇಕ್ಷಕರಿಗೆ ನೀಡುತ್ತದೆ ಇಲ್ಲವೇ ಹೊಸ ಚಿಂತನೆಯನ್ನು ಹುಟ್ಟುಹಾಕುತ್ತದೆ.
ಕನ್ನಡ ಸಿನಿಮಾ ಕಥಾಹಂದರವನ್ನು ಸೂಕ್ಷ್ಮವಾಗಿ ಅವಲೋಕಿಸೋಣ..ಕನ್ನಡ  ಸಿನಿಮಾ ರಂಗ ಅನೇಕ ದಶಕಗಳಿಂದ ಬೇರೆ ಭಾಷೆ ಸಿನಿಮಾಗಳಿಗಿಂತ ಹಿಂದುಳಿದಿದೆ.ಇದು ಒಪ್ಪಲೇ ಬೇಕಾದ ಸತ್ಯ.
ಸಮಕಾಲಿನ  ಬೆಳವಣಿಗೆಯಿಂದ ಇತರ ಭಾಷೆಗೆ ಸಡ್ಡು ಹೊಡೆಯಲು ಎಲ್ಲಾ ಸಿದ್ಧತೆ ಇಂದು ಮಾಡಿಕೊಂಡಿರುವ ಕನ್ನಡ ಸಿನಿ ಕ್ಷೇತ್ರ ರಿಮೇಕ್ ಗೆ ಮಾರು ಹೋಗಿದೆ. ವ್ಯಾಪರದ ದೃಷ್ಟಿಯಿಂದ ಈ ಬೆಳವಣಿಗೆ ಅಗತ್ಯವಾಗಿದೆ.ಕನ್ನಡ ಸಿನಿಮಾ ಇಂದು ಮನೊರಂಜನೆಯ ಮಾತಾಗಿದೆ.ಇಂದೇನಿದ್ದರೂ  ಹೆಚ್ಚು ಪ್ರೇಕ್ಷಕರನ್ನು ಸೆಳೆದು ಬಾಕ್ಸ ಆಫೀಸ್ ಭರ್ತಿ ಮಾಡುವುದು. ಈ ಕಾರಣದಿಂದ ಸಿನಿಮಾ ನೋಡಿ ಭಾಷಾಭಿಮಾನ ಬೆಳೆಸಿಕೊಂಡವರು ಅತ್ಯಲ್ಪ, ಭಾಷಾಭಿಮಾನ ಬೆಳೆಸಲೆಂದೇ ಮಾಡಿದ ಸಿನಿಮಾ ನೋಡುವರೆ ಇಲ್ಲದಂತಾಗಿದೆ.

ಒಂದು ಬಗೆಯಲ್ಲಿ ಯೋಚಿಸಿದರೆ ಕನ್ನಡ ಸಂಸ್ಕ್ರತಿ ನಮ್ಮ ಹುಟ್ಟಿನಿಂದಲೆ ಬೆಳೆದು ಬಂದಿರುತ್ತದೆ.ಅದು ನಮ್ಮ ಭಾವನೆಗಳಿಂದಲೇ ಸದೃಡವಾಗಬೇಕೆ ಹೊರತು ಬಾಹ್ಯ ಪ್ರೇರಣೆಯಿಂದಲ್ಲ. ಕನ್ನಡ ಸಂಸ್ಕ್ರತಿಗೆ ಸಾವಿರಾರು ವರ್ಷದ ಇತಿಹಾಸವಿದೆ. ಹೋಲಿಕೆಯಲ್ಲಿ ಕನ್ನಡ  ಸಿನಿರಂಗ ಇನ್ನು ಮಗುವಷ್ಟೇ..ಕನ್ನಡ ಸಿನಿಮಾಗಳಿಂದ  ಕನ್ನಡ ಸಂಸ್ಕ್ರತಿ ಏಳ್ಗೆ ಕಂಡಿದ್ದಲ್ಲ ಎನ್ನುವುದು ಸಾಬೀತಾದರೂ, ಒಮ್ಮೊಮ್ಮೆ ಉತ್ಕ್ರಷ್ಟ ಸಾಹಿತ್ಯದಿಂದ,ಹಾಡುಗಳಿಂದ,ಕಥೆಗಳಿಂದ ಕನ್ನಡಿಗರ  ಮೈಮನ ರೋಮಾಂಚನವಾಗುವುದಂತು ಸುಳ್ಳಲ್ಲ.
ಇದೆ ಕಾರಣಕ್ಕೆ ಕನ್ನಡ ಸಿನಿರಂಗ ಕನ್ನಡ ತಾಯಿಯ ಸೇವೆ ಸದಾ ಮಾಡುತ್ತಿರಲಿ.


ನಿನ್ನೆ ಎಂಬ ಕರಾಳ

 

ನಿನ್ನೆಯ ದಿನದಂದು ಮುಚ್ಚಿಟ್ಟುಕೊಂಡ ಕಂಪನು
ಇಂದೇಕೆ ಪಸರಿಸುವ ಮನಸ್ಸು ಬಂತು ಹೂವಿಗೆ

ನಿನ್ನೆಯ ದಿನ ಬಿಸಿಲಿಗೆ ಬಾಡುತ್ತಿದ್ದ ಹೂವು
ಇಂದೇಕೆ ತಲೆದೂಗುತ್ತಿದೆ ಕೋಗಿಲೆ ಹಾಡಿಗೆ

ನಿನ್ನೆಯ ದಿನ ಬಿಸಿಲಿಗೆ ಬೇಸರಿಸುವ ಬೇಗೆ
ಇಂದೇಕೆ ರಂಜಿಸುತ್ತಿದೆ ಜಲಧಾರೆ ತಂಪಿಗೆ

ನಿನ್ನೆ ಒಲವಿಲ್ಲದ ಬಳ್ಳಿ ಬೇಡುತ್ತಿದೆ
ಇಂದು ಮರದ ಆಸರೆ.

ನಿಲುವಿಲ್ಲದ ನಿನ್ನೆಯಲಿ ನಲಿಯು ತುಂಬಲಿ ಇಂದು
ನಿನ್ನೆಯ ದಿನವೆಂಬ ಕರಾಳ ಕಳೆದು
ಇಂದಿಗಮೃತವ ಜಯಿಸಲಿ ಈ ಧರಣಿ

ಮಾನವ ಸ್ನೇಹಕೆ ಇಲ್ಲಿ ಕೊನೆಯಾಗದಿರಲಿ
ನಿರಂತರ ತುಂಬಿ ಅಕ್ಷಯವಾಗಲಿ ಈ ಗಣಿ


ತುಂತುರು ಸಿಂಚನ


    ತುಂತುರು ಸಿಂಚನ

ಮಣ್ಣಿನ ಒಡಲಿಗೆ ಘಮ್ಮನೆ ಅಮಲಿಗೆ
ತುಂತುರು ಹನಿಗಳ ಮಿಲನ.

ತಣ್ಣನೆ ಗಾಳಿಯ ಸಣ್ಣನೆ ಮಳೆಗೆ
ತಂಗಾಳಿಗೂ ಹೊಸದಾದ ಕಂಪನ.

ವರ್ಷದ ಧಾರೆಗೆ ಹರ್ಷವ ಮೂಡಿರಲು
ರೋಮಾಂಚನ ಮೈ ಮನ.

ಇಳೆಯಲಿ ಮಳೆಯ ಮುದ್ದಿಗೆ
ತಂಬೆಲ್ಲರ ಋತುಗಾನ..

ಚಾತಕ ಪಕ್ಷಿಯ ಕಾತುರಕೆ
ಹೊಸ ಋತುವಿನ ಆಗಮನ..


ನಡುಮನಿ ಸಿದ್ದ

 

ನಡುಮನಿ ಸಿದ್ದ


ಅವ್ ಹೊತಾ ಬತ್ತಾ..ಅತ್ತಿತ್ತ  ತಿರ್ಗಾಡ್ತಿದ್ದ, ನಿತ್ತಲ್ಲ ನಿತ್ಕಂತಿಲ್ಲ..
ಹೊಯ್ ಎಂತಾ ನಾನ್ ಕತಿ ಹೇಳ್ತಿದ್ನ ನೀವ್ ಹೂಂಗುಟ್ಟುಕ್ಯ..
ಇದ  ದಿನ ನಿತ್ಯದ ಸ್ಟೋರಿ ಮಾರ್ರೆ.ಅದೆ ನಮ್ಮ ಸಿದ್ದಣ್ಣನ ಸ್ಟೋರಿ..
ಅವನಿಗ್ಯಾ ಹಿಂದಾ ಮುಂದಾ?
ಒಂದ್ ಜೀವ್
ಆರು ಕಾಣಿ...ಅವನ್ ಕಂಡ್ ಕಲಿಕ್.
ಎಷ್ಟ್ ಚುರ್ಕ್ ಕಾಣಿ.
ಅವನ್ ಮುಖದ್ಯಾಗ ಇಪ್ಪು ಖುಷಿ ನಿಮ್ಗೆಲ್ಲ್ ಬತ್ತತ್?


"ಬಾಡದಾ ಆರದಾ ಅವನ ಮುಖದರವಿಂದ ಚಂದ ಚಂದ.."


ಅವ್ನಿಗೆ ಈ ಹೊಸ್ರ ಬಪ್ಪುಕು ಒಂದ್ ಕಾರಣ ಇತ್ತ್.
ಓಲ್ಕಾಣಿ  ಆ ಗೆದ್ದಿ ತುಂಡೆಗೆ  ಸಾಲ್ ಮನಿ ಕಾಣ್ಸತ್ತಾ?
ಆಗಳಿಕೆ ಅಲ್ಲ ಮೂರ್ ಮನಿ ಇದ್ದಿತ್ ಮಾರ್ರೆ.
ಆ ನಡ್ಗಿನ ಮನೆಗೆ ಈ ಶ್ರೀಧರ ಇದ್ದದ್.
ಆಬ್ಬಿ ಸಾಯುವರ್ಷದಾಗ ಇವನಿಗೊಂದ್ ಮದಿ ಮಾಡಿದಾಳ್.. ಹೆಂಡ್ತಿ ಏನೋ ಒಂತಿಂಗಳ ಇದ್ದಿದಾಳ್.ಕಡಿಕೆ ಯಾವನ್ನೊ ಕಟ್ಕಂಡ್ ಓಡಿ ಹೋದಳ್ ಅಂಬ್ರ..ನಂಗುತ್ತಿಲ್ಲಾ..ಊರೆಗ ಮಾತಾಡತ್ ಕೆಂಡದ್ ಅಷ್ಟೆ..
ನಿಜ ಯಂತ ಗುತಿತಾ..ಅದ್ ಬೇರೆನೆ ಕತಿ,
ದಿವಳಿ ಹಬ್ಬದ ಸುರೀಗೆ  ಎಂತದ ಮರೆ ಕಿಚ್ಚ ಹಿಡದ.ನೆನ್ಪಿಗೆ ಬತ್ತಿಲ್ಲಾ
.ಹಾ ಹಾ..
ಅದೆ ಅಕ್ಕ ತಂಗಿಯರ್ ಹೂವ್ ಹೆಕ್ಕುಕ್ ಹೋಯ್ದೆ..
ಅಲ್ಲೆ ಒಂದ್ ಗಳ್ಗಿ ಮಾತಾಡ್ಸಕ್ ಬಂದೆ.
ಹ್ಯಾಂಗಿದ್ಯ ಎಂತ ಮರೆಯಾ ಅನ್ಕಂಡ,ಹಂಗೆ ಒಂದ ಮಾತ್  ಹೊತ್ತ ಹಾಕ್ದೆ..ನಂಗ  ಬ್ಯಾಡ್ದಿದ್..ಆರೂ ಗಳ ಗಳ ಅಂಬ ಬಾಯ್ ಕೆಂತಾ..?

"ನೀನ್ ಒಬ್ನೆ ಹ್ಯಾಂಗ್ ಇರ್ತಿ ಮರೆ..ಇದ್ದದ್ ಒಂದ್ ಹೆಂಡ್ತಿನು ಮದಿಯಾಯಿ ಒಂದ್ ತಿಂಗಳ್ಯಾಗೆ ಅಟ್ಟೂಳಿ ಕೊಟ್ಟ ಓಡ್ಸದಿ ಅಂಬ್ರಲೆ"?

ಕೆಂಬುದ ಕೆಂಡ್ಕಂಡಿದೆ ಎದೆಗೆ ಪುಕ್ ಹುಟ್ಟಿತ್ ಬೈತ್ನೊ ಗೀತ್ನೋ ಅಂದೇಳಿ

ಸುಳ್ ಹೇಳ್ರೂ ಹೂ ಅಂಬ್ರಿ...ಬದ್ದು ಹೇಳ್ರೂ ಹೂ ಅಂಬ್ರಿ
ಪಾಪ ಅವ್  ಅದೇ ಮುಗಳ್ ನಗೆಗೆ ಹೇಳ್ದ್ ಕಾಣಿ..

" ನಂಗೆ ಮದಿ ಆಪತಿಗೆ ೩೫ ಮಳಿಗಾಲ ಕಳ್ದಿತ್. ಸುಮಾನಿಗೆ ೨೧ ಅಷ್ಟೇ.. ಅವಳಿಗೆ ಕಾಲೇಜ್ ಅಲ್ ಒಬ್ಬ ಪ್ರೇಂಡ್ ಇದ್ದಿದಾ ..ಅವನ್ನೆ ಮದಿ ಆಪ್ದ ಅಂತ ಅವರಿಬ್ಬರ ಅನ್ಕಂಡಿರ..ಈ  ಆಬ್ಬಿ  ಗಡ್ಬಿಡಿ ಮಾಡಿ ನಂಗ ಗೆಂಟಾಕ್ರ..
ನಂಗು ಅನ್ಸತ್ ಅವರಿಬ್ಬರ ಒಟ್ಟಿಗೆ ಇದ್ರ ಖುಷೆಗೆ ಇರ್ತರ್ ಅಂತ..ಅದ್ಕೆ ಅವನ್ ಕರ್ಸಿ ಘನ ಗಳ್ಗಿ ಕಂಡ ದೇವ್ಸತಾನ್ದಗೆ ನಾನೆ ಮದಿ ಮಾಡ್ಸಿ ಕಳ್ಸಿದೆ.."

ಎಂತ್ ಜನ ಮರ್ರೆ ಸಾವ್ರ ಕೊಟ್ರು ಸಿಗುದಿಲ್ಲ.
ಇಂತ ಉದಾತ್ತ ಜನ ಸಿಕ್ಕುದ ಅಪ್ರೂಪಾ..


"ಮನದಂಗಳ ಮರೆಯಲ್ಲಿ ಮರೆ ಮಾಡಿರುವ ನೋವುಗಳ
ಮೊಗದಲ್ಲಿ ಮಂದಹಾಸ ಮಾಸದ ಮಾರುಡಿಗ"


ಈ ಶ್ರೀಧರ ಎಲ್ಲಾ ಕೆಲ್ಸುಕು ರೆಡಿ..ಗೆದ್ದಿ ಹೂಡೂಕು,ದೋಣಿ ಒತ್ತುಕೂ,ಅಂಚ್ ಕೆರ್ಸುಕೂ,,ದರ್ಲಿ ತಪ್ಪುಕೂ,ಮಕ್ಕಳ ಆಡ್ಸುಕೂ..ಕಡಿನ್ ತುದಿಗೆ ಹೆಣ ಹೊರುಕು ರೆಡಿ...
ಹಿಂಗಾಯೇ  ಅವ ಸಿದ್ದ..ಅದ್ದ್...
ಅನಿಗಿದ್ದ ಟಾಲೆಂಟ್ ಒಂದೆರಡಾ..ಬತ್ತಿಲ್ಲಾ ಅಂಬ ಕೆಲ್ಸ ಇಲ್ಲ..ಆತಿಲ್ಲ ಅಂಬ ಮಾತಿಲ್ಲ.. ಅವನ್ ಮಾಡೊ ಮಿಮಿಕ್ರಿ ಡ್ಯಾನ್ಸ.ಹಾಡೊ ಸೊಂಗ್ ಒಂದ ಎರಡಾ..ನಂಗೆ ಸೀಟಿ ಹೊಡುಕೆ ಅವನೆ ಕಲ್ಸಿಕೊಟ್ಟದ.


"ಸಕಲ ಕಲಾವಿದ ಸಕಲರಲ್ಲಿ ಒಂದಾಗಿದ್ದು
ಜನರ ಮನಶಿಖರವೇರಿದ್ದ"


ದುಡದ್ ದುಡ್ಡೆಗೆ ಒಂದ್ ಪೈಸೂನು ಇಟ್ಕಂಡಗೆ ಇಲ್ಲ..ಬರಿ ಹಾಳ್ಗೇಡಿ ಕಾಂಬರ ಕಣ್ಣಿಗೆ.ಅದ್ರೆ ಅವನ ವಿಚಾರನೆ ಬೇರೆ..ತಾನೆಂತು ಶಾಲಿಗೆ ಹೊಯಿಲಾ..ಅಂದೇಳಿ..ನಾಲ್ಕೈದ್ ಮಕ್ಕಳಿಗೆ ..ಶಾಲಿಚೀಲದಿಂದ ಹಿಡಿದ ಅವರ ಅಶ್ರಮದ ಪೀಸ್ ವರೆಗೂ.. ಅವಂದೆ ಖರ್ಚ್.
ಒನೊಂದಸಲ ನಂಗನ್ಸುದ ಇದ್ದರ್ ಓಡ್ತರ್ರ...ಇಲ್ದಿದ್ದರ್ ಒದ್ದಾಡ್ತರ್..


"ಉದಾತ್ತ ಚರಿತನು ಉದರ ಕಟ್ಟಿ,ಊರಿಗೇ ಪರೋಪಕಾರಿಯಾದ"


ಒಂದಸಲ ಟೆಂಪೊದಾಗೆ ಸರ್ಕಾರದ ಒಂದ ಅನೊನ್ಸಮೆಂಟ್ ಬಂದಿತ್.

ಮನೆಗೊಂದು ಮಗು
ಊರಿಗೊಂದು ವನ

ಅವತ್ತೆ ಅವ್ ಡಿಸೈಡ್ ಮಾಡಿದ ಅಂಬ್ರ..ಮರ ಬೆಳಸರ್ ಸಾಕತಿಲ್ಲ..ಕಾಡೆ ಬೆಳಸುವ ಅಂತ..

ಹಳಿಶಾಲಿ ಕಟ್ಟಡ ಇತ್ತ ಅಲ್ಲೊಂದ ಐದ್ ಎಕ್ರಿಜಾಗ..ಖಾಲಿ ಇತ್ತ..ಜಾಗದ ಒಡಿಯರ್ ಗಿಡಿಯಾರ್ ಯಾರೂ ಇಲ್ಲ..ಅಲ್ಲಿ ಒಂದ ಕಾಡನ್ನೆ ಸೃಷ್ಟಿ ಮಾಡಿದ..ಇದನ್ನ ಮಾತ್ರ ಎಷ್ಟ ಕಷ್ಟ ಅದ್ರು ಸರಿ ಕಡುಕೆ ಬಿಡುಕಾಗ ಮಗ ಅಂದಿದ್ದ.

ನಾನಂದೆ ಯಾರಾರು ಕಡುಕೆ ಬಂದ್ರೆ ಊರರೆಲ್ಲ ಸೇರಿ ಕತ್ತಿ ಹಿಡ್ಕ ಹೊಪಾ..ನೀನೆನ್ ಟೆನ್ಸನ್ ಮಾಡ್ಬೇಡ .

ಅರ್ದೊಸಿ ಕಾಡ್ ಹೋದ್ ಈ ಕತ್ತಿ ಹಿಡದ ಊರರಿಂದಲೆ..

ಊರಿಗಂತು ವನ ಆಯ್ತ್ ...ಮನಿಗೆ ಮಗು ಯಾವಾಗ ಕೇಳ್ದೆ...ನಾನಿದಿನಲ್ಲ ಅಂತ ನಕ್ಕ...


"ಮನಸ್ಸು ಮಗುವಾದಗ ಮನುಷ್ಯ ಲಘುವಾಗುವನು"


ತಿಳಿಮುಗಿಲ ತೊಟ್ಟಿಲಲಿ

 

ತಿಳಿಮುಗಿಲ ತೊಟ್ಟಿಲಲಿ
ಬಿಳಿಮೋಡ ಹುಟ್ಟಿರಲೂ
ಮಳೆ ಕಟ್ಟಿ ಸುರಿಯುವುದೇ ಇಳೆಗೆ..

ಚಳಿಗಾಳಿ ಬೀಸಿರಲು
ನೀರುಕ್ಕಿ ಬರುತ್ತಿರಲು
ಹಾಯ್ದೋಣಿ  ಕಟ್ಟಿರುವೆ ಹೊಳೆಗೆ..

ಮಾಗಿದ ತೆನೆಯ ಫಸಲು
ಘಮ್ಮೆಂದ ಮಲ್ಲಿಗೆ ಎಸಳು
ಉಯ್ಯಾಲೆಯಾಡಿದೆ ನೋಡು ಹಕ್ಕಿಗೂಡು

ಹಾಸೋ ಕಲ್ಲಿನ ಮೇಲೆ ಮಲಗಿ
ಬೀಸೋ ಗಾಳಿಯ ಸವಿಯು
ಸೂಸಿ ತಂದ ಗಂಧ ಎಷ್ಟು ಚೆಂದ

ಕಲ್ಲು ಚಪ್ಪರದಿಂದ
ಹುಲ್ಲು ಹಾಸಿನವರೆಗೂ
ಬೆಳ್ಳಕ್ಕಿ ಸಾಲು..ಎಳೆ ಬಿಸಿಲಲ್ಲೂ..

ಹನಿ ಹನಿ ಇಂಚರಕೆ
ತುಂತುರು ಮಳೆಯಲ್ಲಿ
ನಾಟ್ಯವಾಡಿದೆ ಕಾಮನ ಬಿಲ್ಲು ಎಲ್ಲೋ ಮರೆಯಲ್ಲಿ..


Tuesday, 19 March 2024

ಹೈಕು

 

ಹೈಕು


ಬಾಳು ಬಂಗಾರ
ಮನವು ಬೆರೆತಾಗ
ಒಲವಿನಲಿ..


ಸ್ನೇಹ ಶೃಂಗಾರ
ದೊರೆತಾಗಲೇ ನೀನು
ಸಂಜೆಯಲಿ..


ನಗುವೆಂಬ ಆತ್ಮವಿಶ್ವಾಸಿ

 


ನಗು ತೋರಣವ ಕಟ್ಟಿ ಶೃಂಗರಿಸು ನಿನ್ನ ಮೊಗವ
ಮಂದಹಾಸದಿ ತೋರುವುದು ಆತ್ಮ ವಿಶ್ವಾಸ.

ಮೀನ ಮೇಷ ಎಣಿಸಿ ನಿರ್ಧರಿಸುವ ಮೂಡನಾಗದಿರು
ನಾಯಕನಾಗು ನೀ ನಾಗರಿಕನಾಗು.

ಅಲ್ಲೆ ಇರು..ಎಲ್ಲೆ ಇರು ಎಲ್ಲೆ ಮೀರದಿರು.
ವಾಲುವ ಮನಕೆ ಒಲಿಯದು ಯಶಸ್ಸು.

ಗಾಳಿಗೋಪುರವಾಗದಿರಲಿ ನಿನ್ನ ಗುರಿ
ಗುರು ತೋರುವ ಮಾರ್ಗದರ್ಶನವೇ ನಿನಗೆ ದಾರಿ.

ಇಲ್ಲಿ ಭಾವವು ಮುಖ್ಯ ಭಾವನೆಯು ಮುಖ್ಯ.
ಭಾವುಕನಾಗಿ ಕರ್ತವ್ಯ ಮರೆಯದಿರು.

ತರಾತುರಿಯಲಿ ನೀಡಿದ ತರಬೇತಿ ತ್ವರಿತದಿ ನೀ ಅರಿತೆ.
ಅರಿವು ನಿನಗಷ್ಟೆ ಜಂಭ ಪಡಬೇಡ.
ಅವರಿವರ ಯಶಸ್ವಿಗೆ ಮತ್ಸರವೂ ಬೇಡ.

ಅವರು ದರ್ಶಕರು ಮಾರ್ಗದರ್ಶಕರು
ಅವರ ಅರಿವಿನ ತಿರುಳನ್ನು ದಾರೆಯಾಗಿ ಎರೆದವರು.
ನಮ್ಮೊಳಗಿನ ಶಕ್ತಿಯನ್ನು ನಮಗೆ ಪರಿಚಯಿಸಿದವರು.

ಇವರು ಪ್ರೋತ್ಸಾಹಕರು.
ಅವಕಾಶವನ್ನು ಕಲ್ಪಿಸಿದವರು.
ಆಸಕ್ತಿ ಮೂಡಿಸಿದವರು.
ಆವರಣ ಸೃಷ್ಟಿಸಿದವರು.

ಮಹನ್ ಸಂಸ್ಥೆಯಲ್ಲಿ
ನಾವು ಕಲಿತೆವು..ಆಟವಾಡಿ ಕಲಿತೆವು.
ಹಾವು ಏಣಿ ಜೀವನದಲ್ಲಿ ಮುಂದೆ ಸಾಗುವದ ಕಲಿತೆವು.

ಮತ್ತೊಬ್ಬರ ಬದುಕಿಗೆ ಹೂವಾಗಿ ಅರಳುವುದ ಕಲಿತೆವು.
ಇನ್ನೊಬ್ಬರ ನೋವಿಗೆ ನೆರಳಾಗುವುದ ಕಲಿತೆವು.

ನಮಗೆ ಭರವಸೆ ಇದೆ.
ಈ ಸಂಸ್ಥೆಗೆ ನಮ್ಮ ಪ್ರೌಢತೆಗೆ ತಕ್ಕ ಹೆಮ್ಮೆಯ ಕಾಣಿಕೆ ನೀಡುವೆವು ಎಂಬ ಮನದಾಸೆ ನಮಗಿದೆ.


ಮೌನದಾಸೆ

 ಕೆಂಗುಲಾಬಿ ತೋಟದ ಪಕ್ಕದಲಿ

ಕಣ್ಣಂಚಿಗೆ ಸೆರೆಸಿಕ್ಕ ಹೂಗಾರ
ಹರೆಯದ ಹೆಣ್ಣು ನಕ್ಕರೂ
ಹಲ್ಲು ಕಿರಿಯದ ಮುಜುಗರ

ಕಾಲು ಸವೆದ ಜೀವನ
ಅರ್ಧ ದಾಟಿದ ಯೌವನ
ಆಸೆ ಕಂಗಳ ಹೂ ಮನ
ಯಾರಿ... ಚೆಲುವ ಮೋಹನ...

ತಿದ್ದಿ ತೀಡಿದ ಕುಡಿ ಮೀಸೆ
ಕನಸ್ಸಲ್ಲೂ ಅವನ ಭ್ರಮಿಸಿ
ಹತ್ತಿರದಲ್ಲೆ ಮುದ್ದಿಸುವಾಸೆ

ಮೈತ್ರಿಯ ಮಾಡಲೇ..
ಕೈಯ ಕುಲುಕಲೇ..
ಸ್ನೇಹ ನೋಟವ ಬೀರಲೇ...

ಗೊಂದಲದ ಮಧ್ಯ
ಮೂಡಿದ ಮನದಾಸೆಗೆ
ತಿಲಾಂಜಲಿ ನೀಡಿ
ಸದ್ದಿಲ್ಲದೆ ಜಾರಿ ಕೊಳ್ಳಲೇ..

ಇಲ್ಲ..ಅವನ ಅರಿವಿನಲ್ಲಿ
ನನ್ನ ಪರಿವೆಯಿಲ್ಲದೆ ಕಿತ್ತಿರುವ
ಗುಲಾಬಿ ಮೊಗ್ಗ  ಕೈಗಿತ್ತು ಜೋಪಾನ ಎನ್ನಲೇ..



ಮೌನಿ

 

ಮೌನಿ

ಮರೆತು ಹೋದೆ ನಾ
ಮೌನದ ಜೊತೆ ಬೆರೆತು ಹೋದೆ ನಾ
ಮಾತು ಕಟ್ಟಿ ಬಿಟ್ಟ ಪ್ರೇಮಿ ನೀನು
ಭಾವನೆ ವ್ಯಕ್ತಪಡಿಸಲಾಗದ  ಮೌನಿ ನಾನು.
ಅತ್ತು ಬತ್ತಿ ಹೋಗುವ ಮುನ್ನ
ಭಾವನೆಗಳಿಗೆ ಜೀವ ನೀಡು.
ಹೊತ್ತು ಹೊತ್ತಿಗು ಕಾಡುವ ನೆನಪು
ನಿನ್ನ ದಾರಿಯನ್ನೆ ಕಾದಿದೆ..
ಹೃದಯವ ಕುಕ್ಕಿ ರುಚಿ ನೋಡವ ತವಕವೇಕೆ
ಅದು ಚೂರದ ಗೂಡು ಒಂದು ಮಾಡು.


ಮನ ಜಾರಿತು ನಿನ್ನೊಳಗೆ

 

ಒಲವಿನ ಓಲೆಗೆ ಒಲಿದಾಳಾಕೆ
ಇನಿಯನ ಕಾಯುವ ಕಾತುರಕೆ..
ಕಸಿವಿಸಿ ಮನಕೆ ಹುಸಿ ಬಯಕೆ..  
ಮರಳ ಮೇಲೆ ಬೆರಳು ಗೀಚುತಾ ತರುಳೆ
ಮನದಲಿ ನಗುತಿರೆ.
ನಯನ ನಾಚುತಿರೆ ವದನ ನನ್ನ ದೋಚುತಿರೆ
ಭಾವ ತುಂಬಿದ ಬಯಕೆಗೆ ಜೀವ ಬಂದಿದೆ ಇಂದೆ.
ಕಣ್ಣ ಸನ್ನೆಯಲ್ಲಿಯೇ ಕೆನ್ನೆ ಕೆಂಪೇರಿದೆ.
ಕಿರುಬೆರಳ ಹಿಡಿದಾಗ ಅಡಿ ಮುಂದಿಟ್ಟು ದೂರ ಸರಿಯದೆ ಎದೆಗೆ ಒರಗಿದವಳು.
ಅಪ್ಪುಗೆಗೆ ಇದೆ ಒಪ್ಪಿಗೆಯೆಂದು ಹೆರಳ ಸರಿಸಿದೆ ಮೆಲ್ಲಗೆ.
ತೋಳ ಬಂಧನದಲ್ಲಿ ತೋಯಿಸಿದೆ ಮುತ್ತುಗಳ
ಬಿಸಿಯ ಬೆಸುಗೆಯಲ್ಲಿ ಬೆಸದ ಬಂಧನದಲ್ಲಿ
ಬರಿಯ ಭಾಷೆ ಉಸಿರಿನಲ್ಲಿ
ಬೆದರಿದ ಹನಿಗಳು ಕುಸಿದವು ಉಸುಕಿನಲ್ಲಿ.
ಕಣ್ಣ ಕಾಡಿಗೆ ಕಡಲ ಪಾಲಿಗೆ.
ಉಕ್ಕಿದ ಅಲೆಗಳ ಸಿಂಚನದಲ್ಲಿ ದೇಹ ತಂಪೇರಿದೆ.
ನಿನ್ನ ಪ್ರೀತಿಗೆ ನನ್ನ ಬಾಳು ಬೆರಗಾಗಿದೆ..


ಒಲವಿನ ಗೆಳತಿ

 

                     ಒಲವಿನ ಗೆಳತಿ
ಹುಚ್ಚು ಹುಡುಗಿ ನಿನ್ನ ನಾನು
ಮೆಚ್ಚಿಕೊಂಡೆ ಏಕೋ ಏನೋ
ಹೃದಯ ಬಯಸಿತೆ ನಿನ್ನ ಸಂಗ ಒಂದು ಅರಿಯೆನು.

ಮೋಡಿ ಮಾಡಿ ನನ್ನ ಕರೆದೆ
ನಿನ್ನ ನೋಡಿ ನನ್ನೆ ಮರೆತೆ
ಆಹಾ ನಂಟು ಮಾಡಿಕೊಂಡೆಯಲ್ಲ ಎಂತ ತುಂಟಿ ನೀನು.

ಸ್ನೇಹದ ನೋಟವಿದೆ
ಮಾತಿನಲ್ಲಿ ಮೋಡಿ ಇದೆ
ಹೇಳಲಾರದೆ ನಿನ್ನ ಸಲುಗೆಗೆ ನಾ ಸೋತು ಹೋದೆನು.

ಲಜ್ಜೆಗೆ ಹೆಜ್ಜೆ ನೀನು
ಹೆಜ್ಜೆಗೆ ಗೆಜ್ಜೆ ನಾನು 
ನನ್ನ ಅಂತರಂಗವ ಅಂದದಲ್ಲಿ ಬಂಧಿಮಾಡಿದೆ ನೀನು.

ಪ್ರೀತಿಯಲ್ಲಿ ಮೇಘಮಾಲೆ
ಮಾತಿನಲ್ಲಿ ಮೌನದೋಲೆ
ಒಲವಿನಲ್ಲಿ ನನ್ನ ತುಂಬಾ ಸನಿಹ ಸೆಳೆದವಳೇ..


ಬತ್ತಿದೆ ಭಾವನೆ ಮತ್ತೆ ಬಿತ್ತದಿರು ಕಾಮನೆ.

 

ಬತ್ತಿದೆ ಭಾವನೆ ಮತ್ತೆ ಬಿತ್ತದಿರು ಕಾಮನೆ.
ನಿನ್ನಂತರಂಗ ಅರಿವುವ ಮನಸ್ಸು ನನಗಿಲ್ಲ..
ನನ್ನದೀಗ ಪ್ರೀತಿ ಬತ್ತಿದ ಹೃದಯ..
ಕೇವಲ ನಿನ್ನ ಗೋಳು ಕೇಳಬಹುದು ವಿನಹ
ಬಾಳು ನೀಡಲು ಸಾಧ್ಯವಿಲ್ಲ.

ಕಾಡಬೇಡ ನಿನ್ನ ಕೂಡಿಕೊಳ್ಳುವ
ಕೊರಿಕೆ ನನಗಿಲ್ಲ
ಹಂಬಲಿಸುವ ಹೃದಯದಲ್ಲಿ
ಬೆಂಬಲಿಸುವ ಮನಸ್ಸೆ ಇಲ್ಲ.
ಮತ್ತೊಮ್ಮೆ ಪ್ರೀತಿ ಸಂಭವಿಸಲು ಸಾಧ್ಯವೇ ಇಲ್ಲ.

ಮುನಿಸಿಕೊಂಡಿದೆ ಮನಸ್ಸು ಕಡೆಗಳಿಗೆಯಲ್ಲಿ
ನಿನ್ನೊಂದಿಗೆ ಕರಗಿತು ಈ ಜಗತ್ತು.
ಕನಸೊಂದಿಗೆ ನಾ ಮಣ್ಣಾಗಿದ್ದಿದ್ದರೆ ಚೆನ್ನಾಗಿತ್ತು
ಇಂದು ನಿನ್ನ ದುರಂತಕೆ ನಗುವವರ
ಮಣಿಸಲಾಗುತ್ತಿಲ್ಲ,ನಿನ್ನ ತಣಿಸಲಾಗುತ್ತಿಲ್ಲ..


ಮುದ್ದು ಪೆದ್ದು

 

ನೀ ಕಾರಣವೋ ಪ್ರೇರಣೆಯೋ
ನನ್ನ ಖುಷಿಗೆ
ಓ ಪ್ರಿಯರಾಣಿಯೇ

ಮುದ್ದು ಪೆದ್ದು ಹುಡುಗಿ 
ನಿನ್ನ ಕದ್ದು ನೋಡವಾಸೆ..
ಸದ್ದು ಮಾಡದೆ ಬಂದಿರುವೆ ...ಈ ಮುಂಜಾವಲ್ಲಿ..

ಮುಸುಕೆಳೆದು ಕೊಳ್ಳದಿರು
ಮಗ್ಗಲು ಬದಲಾಯಿಸದೆ ಮಲಗು..
ಸಣ್ಣ ನಗುವಂದಿಗೆ..
ಕಿಟಕಿಯಲ್ಲಿ ಬಂದಿಣುಕುವೆ  ಆ ಚಂದ್ರನಂತೆ...

ನಿನ್ನ ಆಸೆಗೆ ಕೊಟ್ಟಿರುವ ಭಾಷೆ ಮುರಿದಿರುವೆ..
ಕೊಪಿಸಿ ಕೊಳ್ಳದಿರು..
ನೀ ಕೊಟ್ಟ ಸಿಹಿ ಮುತ್ತು ಖಾಲಿಯಾಗಿದೆ.

ಮೊದಲೇ ಕೊಟ್ಟಿರುತ್ತಿದ್ದರೆ
ಈ ಖಯಾಲಿ ಬೇಕಿರುತ್ತಿರಲಿಲ್ಲ..
ಭರ್ತಿ ಮಾಡಿಬಿಡು ನೀನೇ ಖುದ್ದಾಗಿ
ಸವಿಯ ಸಿಹಿ ಮುದ್ರೆಯೊತ್ತಿ...


ಗೆಳತಿ

 



ಗೆಳತಿ 
    
ತಿಳಿ ನೀಲಿ ಕಂಗಳ ಚೆಲುವೆ
ನಿನ್ನ ಹಳೆ ನೆನಪು ಮಾಸಲು
ಹೊಸದೇನ ನಾ ಮಾಡಬೇಕು ಹೇಳು.

ಮುಂಗುರುಳ ಮೇಘ ಸುಂದರಿ
ನಿನ್ನ ಬಿಳಿ ಮೊಗದಲ್ಲಿ ಹಳೆ ನಗುವ ಸ್ಪುಟಿಸಲು
ನಾನೇನು ಮಾಡಬೇಕು ಹೇಳು..

ನಿನ್ನ ಪ್ರೀತಿಯಲ್ಲ ಕದ್ದೊಯ್ದು
ಖಾಲಿ ನೆನಪುಗಳನ್ನು ಬಿಟ್ಟು ಹೋದ ಅವನಿಗೆ
ಗುಡ್ ಬಾಯ್ ಹೇಳಲು
ನಾನೇನು ಮಾಡಬೇಕು ಹೇಳು..

ಅಪರೂಪಕ್ಕೆ ನಿನ್ನ ನೋಡುತ್ತಿದ್ದೆ
ಏನೋ ಗುಂಗಲ್ಲಿ ಖುಷಿಯಾಗಿರುತ್ತಿದ್ದೆ
ಆ ಹಳೆ ಹುಡುಗಿ ಬೇಕು ನನಗೆ
ಅದಕ್ಕಾಗಿ ನಾನೇನು ಮಾಡಲಿ ಹೇಳು..

ನಿನ್ನ ದೂರಮಾಡಿದ ಗೆಳೆಯನಿಗೆ
ನಿನ್ನಂತೆ ಹಿಡಿಶಾಪ ಹಾಕಲೇ
ಇಲ್ಲ ಮೊದಲಬಾರಿಗೆ ನೀ ನನ್ನೊಂದಿಗೆ ನಕ್ಕಾಗ
ಅವನ ಮರೆಯಲ್ಲಿ  ನೋಡುತ್ತಿದ್ದ
ನಿನ್ನ ಹಳೆ ನಗುವ ನಾ ಮರೆತು ಬಿಡಲೇ?


ಹೂವು

 

ಹೂವು


ನನ್ನ ಎಳೆ ವಯಸ್ಸಿನಲ್ಲಿ ನನ್ನದೇ ಗುಡಿಸಿಲಿನಲ್ಲಿದ್ದ ಕಾಡ ಹೂವೊಂದು ನಗುವುದ ಕಂಡೆ
ಬೇಡಿ ಬಂದವನಿಗೆ ನೀಡದೆ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡೆ.

ಅಕ್ಕಪಕ್ಕದ ಹೂವುಗಳು ನಲುಗುವುದ ಕಂಡೆ ನೀನೊಬ್ಬಳೆ ನಗುವುದ ಕಂಡೆ.

ಬೇಡ ಬೇಡವೆಂದರೂ ಬೇಡನ ಕರೆದು
ಬಾಡಿಹೋಗುವ ಮುನ್ನ ಬಳುವಳಿಯಾಗಿ ನೀಡಿದೆ.

ನೀಡುವ ಮುನ್ನ ನನಗರಿವಿರಬೇಕಿತ್ತು.
ಬತ್ತಳಿಕೆಯಲ್ಲಿ ಮುಳ್ಳುಗಳೆ ತುಂಬಿರುವ ಬೇಡನಿಗೆ
ಹೂವಿನ ಮೃದುತ್ವ ಹೇಗೆ ಅರಿತಾನು..

ಇಲ್ಲೇ ಬಾಡಿದ್ದರೆ ನಿನ್ನ ಬೀಜಗಳಿಂದ ಹೂ ತೋರಣವೇ ಗುಡಿಸಲ ಮುಂದೆ ಇರುತ್ತಿತ್ತೊ ಏನೋ .
ಆಗಾಗ ಬೇಲಿಯಲ್ಲಿದ್ದ ಹೂಗಳ ಕಂಡಗ ನಿನ್ನೆ ಹುಡುಕುತ್ತಿದ್ದೆ ನಿನ್ನ ವಂಶವೃಕ್ಷ ಇರಬಹುದೆಂದು.

ಒರಟ ಅವನು ಮುಳ್ಳುಗಳ ಉಳಿಸಿ
ಎಸಳುಗಳ ಎಸೆದಿರಬಹುದು.
ಹೂವಿಗೆ ಮುಳ್ಳು ಕಾವಲು ಹೊರತು ಆಸರೆಯಲ್ಲ..
ಆಸರೆ ನೀಡುವ ದುಂಬಿ ಇತ್ತ ಕಡೆ ಸುಳಿದಿಲ್ಲ.

ಈ ಇಳಿ ವಯಸ್ಸಲ್ಲಿ ಎದುರಿದ್ದರೂ ನನ್ನ ಕಣ್ಗಳು ನಿನ್ನ ಗುರುತಿಸಲಾರವು.
ನೀ ಚುಚ್ಚಿದರೂ ಮುಳ್ಳುಗಳು ನನ್ನ ಸ್ಪರ್ಷಿಸಲಾರವು.


ಕೇಳು ನನ್ನವನೇ...

 

ಕೇಳು ನನ್ನವನೇ...ನನಗಾಗಿ ವ್ಯಥೆ ಪಡದಿರು..
ಭಾವದ ಜೀವ ನೂರು ಕಂಬನಿಯ ಹನಿಗಳ  ಮಿಡಿವಾಗ...
ಸ್ನೇಹದ ಸಿಂಚನ ಹರಿಸಬಹುದೇ..?

ಮರಳು ಮಾಡದಿರು ಮರೆಯಾಗು ನೀನು
ಮರಳುವೆ ನಾನು ಹಳೆ ನೋವಿಗೆ..
ಮುರಿದಿರೋ ಮನದಲಿ  ಹೊಸ ಹಾಡಿಗೆ..

ನನ್ನ ಭ್ರಮೆಲೋಕದಲಿ
ಹೇಗೆ ಸ್ಪಂದಿಸಲಿ ನಿನ್ನ ಭಾವಕೆ..
ಕಟ್ಟಿಕೊಂಡ ಬಂಧವಿನ್ನು ಬಿಟ್ಟು ಹೋಗದೆ ತಡೆದಿರುವಾಗ.

ಸ್ನೇಹಕ್ಕಿಲ್ಲಿ ಸೇತುವೆ ಕಟ್ಟದಿರು..
ಜಾರುತಿರುವ ಮನದಲಿ ಏರು ಪೇರಿನ ಭಾವ ಬೆಸೆಯದಿರು.
ಕೊಚ್ಜಿಹೋಗುವೆ ನಾ ನಿನ್ನ ಪ್ರೀತಿಯ ಪ್ರವಾಹದಲಿ...

ಕಲಕಿ ಹೋದ ಮನವ ಮತ್ತೆ ಕುಲುಕದಿರು..
ನೀ ನಿಲುಕದಿರು ನನಗೆ.. ಆಸೆಯ ಬಿತ್ತದಿರು..
ವಿರಹದಂಚಿಗೆ ನನ್ನ ದೂಡದಿರು.

ಗುಡಿಸಲೊಳಗಿನ ಮಡಿವಂತಿಕೆಗೆ..
ಹೆದರಿದ ಮರಿ ಜಿಂಕೆ‌ ನಾನು..
ಬೇಡವೆಂದರೂ ಬೇಡನ ಸ್ನೇಹ ದೊರೆತಿರುವದೆನಗೆ..
ಬಾಳಿನ ಉರಿಯಲಿ ಮನದ ಮರೆಯಲಿ ಮರೆಯಾಗು ನೀ

ಕ್ಷಮಿಸು ಗೆಳೆಯಾ ಮುನಿಸ್ಸಿನ್ನೇಕೆ
ಶಪಿಸೆನು ನಾನು ಯಾರನ್ನು.
ಯಾರ ದೂಷಿಸಲಿ ನಿನ್ನನ್ನ ,ನನ್ನನ್ನ ಆ ದೇವನನ್ನ..


ನಾ ಕನವರಿಸಿದ ಮೂಕಜ್ಜಿ

 

ನಾ ಕನವರಿಸಿದ ಮೂಕಜ್ಜಿ


ಕಾಡು ಕಂಡಿದ್ದನ್ನು ನಾಡು ಕಂಡಿತೇ
ಇಲ್ಲ ನಾಡು ಕಂಡಿದ್ದನ್ನು ಕಾಡು ಕಂಡಿತೇ
ಈ ಜೋಡು ಬೆಳೆದದ್ದು ಕಾಡಿನಲ್ಲೋ,
ಇಲ್ಲಾ ನಾಡಿನಲ್ಲೋ.
ಇಲ್ಲಾ ನಾಡುನುಡಿಗಳ ಚಿಂತನೆಯನ್ನು ಓಡು ಕಂಡಿತೇ
ಈ ಜಾಡು ಹಿಡಿದು ಹೊರಟವರು ಅದೆಷ್ಟು ಗಟ್ಟಿಗರು?
ಈ ಚಿಪ್ಪಿನ ಮೆದುಳು ಕಲ್ಪಿಸಿದೆಷ್ಟು? ಗ್ರಹಿಸಿದೆಷ್ಟು?

ಬಹುಶಃ ಆ ಕಾಡು ನಾಡನ್ನು ಕಂಡಿರಲಿಕ್ಕಿಲ್ಲ,
ಕಾಡ ಕಡಿದು ನಾಡ ಮಾಡಿ ಜೋಡಿಯಾಗಿ ಬಾಳಿದ್ದನ್ನು ಯಾರೂ ಕಂಡಿರಲಿಕ್ಕಿಲ್ಲ.
ನಮ್ಮ ಗ್ರಹಿಕೆ ಅಲ್ಪವಾಗಿದ್ದರೆ ನಮ್ಮ ಕಲ್ಪನೆ ಅಗಾಧ.
ಅದೇ ನಮ್ಮ ಗ್ರಹಿಕೆ ಅನಂತವಾಗಿದ್ದರೆ ನಮ್ಮ ಕಲ್ಪನೆ ಆಗ ಕ್ಷಣಿಕ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ಮೂಕಜ್ಜಿಯ ಕನಸು ಇದೊಂದು ವಿಶಿಷ್ಟವಾದ ಅದ್ಭುತವಾದ ಕಾದಂಬರಿ.

ಅದೆಷ್ಟು ತಲೆಬುಡವಿಲ್ಲದ ಗೊಡ್ಡು ಸಂಪ್ರದಾಯಗಳು ನಮ್ಮಲ್ಲಿ ಬೆಳೆದು ಬಂದಿವೆ.
ಈ ಸಂಪ್ರದಾಯಗಳು ತಲಾತಲಾಂತರದಿಂದ ಬಂದಿದ್ದರೂ ನಾವೀಗ ಅದರ ಕೊಂಡಿ ಕಳಚಿಕೊಳ್ಳುವ ಪ್ರಯತ್ನದಲ್ಲಿದ್ದೇವೆ.ಇಂಥ ಕಾಲಘಟ್ಟದಲ್ಲಿ ಅದಕ್ಕೆ ಪ್ರೇರಣೆ ಎಂಬಂತೆ ಕಾರಂತರು ತಮ್ಮ ಮೂಕಜ್ಜಿಯ ಕನಸು ಎಂಬ ಕಾದಂಬರಿಯನ್ನು ರಚಿಸಿದರು.

ಲೇಖಕರಾದ ಡಾಕ್ಟರ್ ಕೆ. ಶಿವರಾಮ ಕಾರಂತರೆ ಹೇಳುವಂತೆ ಇಲ್ಲಿ ಕಥೆಗೆ ನಾಯಕರು ಇಲ್ಲ ನಾಯಕಿಯರೂ ಇಲ್ಲ. ಇಲ್ಲಿನ ಪಾತ್ರಗಳು ಜೀವಂತಿಕೆಯ ಸನ್ನಿವೇಶಗಳನ್ನು ನವಿರಾಗಿ ಕಟ್ಟಿಕೊಡುತ್ತದೆ.

ಈ ಕಾದಂಬರಿ ಓದುವ ಮೊದಲು ನನಗನಿಸಿದ್ದು ಹೀಗೆ..
ಮೂಕಜ್ಜಿಗೆ ಕನಸು ಬಿದ್ದಿರಲುಬಹುದು ಅಥವಾ ಯುವಜನತೆಯ ಮೇಲೆ ಅವಳು ಕನಸು ಕಟ್ಟಿಕೊಂಡಿರಲೂ ಬಹುದು ಆದರೆ ಲೇಖಕರಿಗೆ ಅವಳು ಹೇಗೆ ಪರಿಚಿತಳು? ಮೂಕಿಯಾದ ಅವಳು ಹೇಗೆ ವಿವರಿಸಿಯಾಳು?

ಕಾದಂಬರಿ ಓದಿ ಮುಗಿಸಿದ ನನಗೆ ವಸ್ತುಸ್ಥಿತಿಯ ಅರಿಯು ಬೇರೆಯೇ ಆಗಿತ್ತು.
ಮೊದಲ ಅಧ್ಯಾಯ ಓದುತ್ತಿರುವಂತೆ ಇದೊಂದು ಅಧ್ಯಯನದಿಂದ ಮೂಡಿಬಂದ ಬರಹವೆಂಬುದು ಸ್ಪಷ್ಟವಾಗುತ್ತದೆ.
ಇಲ್ಲಿನ ಪಾತ್ರಗಳು ಅದರದ್ದೇ ಆದ ಘನತೆಯನ್ನು ಸೃಷ್ಟಿಸಿಕೊಂಡಿವೆ.
ಈ ಪಾತ್ರಗಳು ಕಥೆಯಿಂದ ನಮ್ಮೊಂದಿಗೆ ಪಯಣಿಸುತ್ತ ನಮ್ಮ ಆಲೋಚನೆಗಳೊಂದಿಗೆ ವಿಮರ್ಶಿಸುತ್ತಾ ,ಚರ್ಚಿಸುತ್ತಾ, ಘರ್ಷಿಸುತ್ತಾ ಸಾಗುತ್ತದೆ.

ಬಾಲ್ಯದಲ್ಲಿ ವಿಧವೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ಮೂಕಜ್ಜಿಯು ಜೀವನದಲ್ಲಿ ಅದೆಷ್ಟು ನೋವುಗಳನ್ನು ಅನುಭವಿಸಿದರು ಅವಳ ಬದುಕುವ ಛಲ ನಮ್ಮಲ್ಲಿ ಆಶ್ಚರ್ಯ ಮೂಡಿಸುತ್ತದೆ.
ಮೂಕಜ್ಜಿಯು ಕೇವಲ ಒಂದು ಪಾತ್ರವಾಗಿರದೆ ನಮ್ಮಲ್ಲಿರುವ ಅನೇಕ ಸಂದೇಹಗಳಿಗೆ ತರ್ಕಬದ್ಧವಾದ ಉತ್ತರ ನೀಡುತ್ತಾ ಮೂಲ ಸ್ಥಿತಿಯ ಬಗ್ಗೆ ಚಿಂತಿಸುವಂತೆ ಮಾಡುತ್ತಾಳೆ.
ನಮ್ಮಲ್ಲಿರುವ ಸೃಷ್ಟಿಯ ಬಗ್ಗೆ ಅನೇಕ ಕುತೂಹಲಗಳು ಆಶ್ಚರ್ಯ ,ಭ್ರಮೆ, ನಂಬಿಕೆ-ಮೂಢನಂಬಿಕೆ ,ಶಾಸ್ತ್ರ ಹೀಗೆ ಹತ್ತು ಹಲವು ಮೂಕ ಪ್ರಶ್ನೆಗಳಿಗೆ ಅವಳ ಕನಸಿನಿಂದ ಸುಪ್ತ ಮನಸ್ಸಿನಿಂದ ಉತ್ತರ ದೊರೆಯಬಹುದು.

ಇಲ್ಲಿ ಲೇಖಕರು ಸಂಶೋಧನೆ ನಡೆಸಲು ಸುಬ್ಬರಾಯರಂತಹ ಪಾತ್ರ ಸೃಷ್ಟಿಸಿದ್ದಾರೆ.ಸುಬ್ಬರಾಯರ ಮುಖಾಂತರ ಅನೇಕ ವಿಚಾರಗಳ ಮಂಥನ ಮಾಡಿದ್ದಾರೆ. ವಿಚಾರಗಳನ್ನು ಶಾಸ್ತ್ರೀಯವಾಗಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ್ದಾರೆ.
ನೈಜತೆ ಹಾಗೂ ಮೂಢನಂಬಿಕೆಯ ಮಗ್ಗಲಲ್ಲೂ ವಿಮರ್ಶಿಸಿದ್ದಾರೆ, ಮೂಢನಂಬಿಕೆಯ ವಿಡಂಬನೆ ಮಾಡುತ್ತಾ ಅಲ್ಲಲ್ಲೆ ಹಾಸ್ಯದ ಲೇಪನ ಮಾಡಿರುವವರು.

ಕತೆಯಲ್ಲಿ ಅನೇಕ ವಿಚಿತ್ರವಾದ ಸಂಪ್ರದಾಯಗಳು ಹಾಗೂ ಸನ್ನಿವೇಶಗಳ ವಿವರಣೆ ಇದೆ. ಕೆಲವೊಂದು ಆಚರಣೆಗಳು ನಮಗೆ ಅಸಹ್ಯ ಉಂಟು ಮಾಡದೆ ಆಶ್ಚರ್ಯ ಸೃಷ್ಟಿಸುವಂತದ್ದು.
ಒಮ್ಮೊಮ್ಮೆ ತೀರಾ ಕಾಲ್ಪನಿಕ ಇರಬಹುದೆ? ಅಥವಾ ಹೀಗೊಂದು ಪ್ರಪಂಚ ಇದ್ದಿತೆ ಎಂದನಿಸುವುದುಂಟು.

ಇಲ್ಲಿ ಸಾವಿರಾರು ಧರ್ಮಗಳು ಬೆಳೆದುಬಂದಿವೆ ಈ ಎಲ್ಲ ಧರ್ಮಗಳಲ್ಲೂ ಕುಂದುಕೊರತೆಗಳನ್ನು ನಾವು ನೋಡಬಹುದು,  ಹಾಗಿರುವುದರಿಂದಲೆ ಯಾವುದನ್ನು ಒಪ್ಪಲಿ ಯಾವುದ ಬಿಡಲಿ ಎನ್ನುವ ಗೊಂದಲ ಮೂಡುವುದು ಸಹಜ.

ಒಂದು ಕಾಲದಲ್ಲಿ ಸುಂದರವಾದ ಸಂಸ್ಕೃತಿ ಕೆಲವೊಂದು ಆಚರಣೆಗಳು ಇಂದಿಗೆ ತಪ್ಪಾಗಿ ಕಾಣಿಸಬಹುದು.  ಆ ಕಾಲಘಟ್ಟದಲ್ಲಿ ಅದು ಸರಿಯಾಗಿರುತ್ತದೆ ಇಲ್ಲದಿದ್ದರೆ ಅಲ್ಲಿ ವಿರೋಧದ ಅಲೆಗಳು ಹೋರಾಟವಾಗಲೀ ನಡೆಯಬೇಕಾಗುತ್ತದೆ.

ಈ ಜಗತ್ತಿನಲ್ಲಿ ಅನೇಕ ನಾಗರಿಕತೆಗಳು ಹುಟ್ಟಿ ತಮ್ಮ ಸಿದ್ಧಾಂತಕ್ಕಾಗಿ ಹೋರಾಡಿ ಕೊನೆಗೆ ಅಧಃಪತನವಾಗಿದೆ. ಅವೆಲ್ಲರ ಮಿಶ್ರಣ ವೆಂಬಂತೆ ನಾವು ಇವಾಗ ನೋಡುವುದು ಶೇಷ ಮಾತ್ರ.ಈ ಶೇಷವನ್ನು ಪೂರ್ಣವೆಂದು ನಾವು ನಂಬಬೇಕೆ?

ಉದಾಹರಣೆಗೆ ಇಂದಿನ ಯುಗದಲ್ಲಿ ಜಗತ್ತಿನಾದ್ಯಂತ ಅನೇಕ ಆಚರಣೆಗಳನ್ನು ನೋಡಬಹುದು ಪಾಶ್ಚಾತ್ಯ ಸಂಸ್ಕೃತಿಗಳು ನಮಗೆ ಉಸಿರುಗಟ್ಟಿಸಿ ತಪ್ಪು ಪರಿಕಲ್ಪನೆಯನ್ನು ಮೂಡಿಸಿರಬಹುದು.ಆದರೆ ಅಲ್ಲಿನ ಜನತೆ ಅದನ್ನು ಮೆಚ್ಚಿ ಶ್ಲಾಘಿಸಿದರು.ಅವರೇನು ದಡ್ಡರೆ? ಅವರಿಗೆ ಸರಿ-ತಪ್ಪುಗಳ ಮಾನದಂಡಗಳು ಇಲ್ಲವೇ?

ಸರಿ-ತಪ್ಪುಗಳನ್ನು ಅಳೆಯುವ ಮಾನದಂಡವೆಂದರೆ ಆಗಿನ ಕಾಲಘಟ್ಟ ,ವಾತಾವರಣ ,ಪರಿಸ್ಥಿತಿ ಹಾಗೂ ಪ್ರಸ್ತುತ ಜನರ ಮನಸ್ಥಿತಿಗಳು. ನಾವಂದುಕೊಂಡಂತೆ ಸತ್ಯ ಸಾರ್ವಕಾಲಿಕವಾಗಿ ಇರಬೇಕಾಗಿಲ್ಲ.

ಕೇವಲ ನೋಟದಿಂದ ವ್ಯವಹಾರದಿಂದ ವ್ಯಕ್ತಿ ಅಥವಾ ವಸ್ತುವಿನ ಗುಣ ಸ್ವಭಾವವನ್ನು ಅರಿಯಲಾಗದು ನಾಲ್ಕು ಜನರಿಂದ ನಾಲ್ಕು ಮಗ್ಗುಲಲ್ಲಿ ವಿಮರ್ಶಿಸಿದರೆ ಅದರ ಒಳ ಹೊರವು ಅರಿಯುವುದು.

ನಮ್ಮೂರು ನಮಗೆ ಸ್ವರ್ಗ ಎನಿಸಬಹುದು. ಕೆಲವು ವ್ಯಕ್ತಿಗಳಿಗೆ ನಿಂತ ನೆಲವು ಕೊನೆಗೊಮ್ಮೆ  ಬಿಕೋ ಎನಿಸಬಹುದು.ಹೊಸತನಕ್ಕಾಗಿ ಹಾತೊರೆಯಬಹುದು. ಹೀಗೆ ಹಾಳು ಹಳೆಯದೆಲ್ಲವೂ ಹಳೆದು ಹೊಸದು ಹುಟ್ಟಿರಬಹುದು.

ರಾಜ್ಯ ದೊಡ್ಡದು, ರಾಜಧಾನಿ ಅದರ ಹೃದಯಭಾಗ, ನಮಗೆಲ್ಲರಿಗೂ ಅನಿಸುವುದಿಷ್ಟು ನಮ್ಮ ನಗರ ರಾಜ್ಯ ನಮ್ಮೂರು ರಾಜಧಾನಿ ನಾವಿಲ್ಲಿಯ ಪ್ರಜೆಗಳು.ನಮ್ಮೂರಲ್ಲಿ ಎಲ್ಲಾ ವೈಭೋಗಗಳಿವೆ ಕಲೆ-ಸಾಹಿತ್ಯ ವಾಸ್ತುಶಿಲ್ಪ ಯಾವುದಕ್ಕೂ ಕೊರತೆಯಿಲ್ಲ ಆದರೆ ನಮ್ಮನ್ನು ನಾವು ರಾಜರಾಗಿ ಎಂದು ಕಲ್ಪಿಸಿಕೊಂಡಿಲ್ಲ.
ಇದು ಈಗಿನ ಅನಿಸಿಕೆ ಅಷ್ಟೇ. ಈ ನಮ್ಮ ಅನಿಸಿಕೆಗೆ ಮೂಲ ಪ್ರೇರಣೆ ಎಲ್ಲಿಂದ ಬಂತೋ ತಿಳಿಯದು. ನಮ್ಮ ಇತಿಹಾಸ ಕೆದಕಿ ನೋಡಿದರೆ ತಿಳಿಯಬಹುದೇನೊ. ಆವಾಗ ಇಲ್ಲಿನ ಪ್ರತಿ ಕಲ್ಲುಗಳು ಮಾತನಾಡಬಹುದೇನೊ ಕಲ್ಪನೆಯಲ್ಲಿದ್ದ ರಾಜ ಸಿಕ್ಕರೂ ಸಿಗಬಹುದು.

ಕಥೆಯ ಮಧ್ಯದಲ್ಲಿ ಲೇಖಕರು ನಮ್ಮಲ್ಲಿರುವ ಜಾತಿ ಕಟ್ಟುಪಾಡು ಆದಿಯಿಂದಲೂ ಹುಟ್ಟಿದ್ದಲ್ಲ ನಾವೇ ನಮಗೆ ಬೇಕಾದ ಹಾಗೆ ಸೃಷ್ಟಿಸಿಕೊಂಡಿದ್ದೇವೆ ಎನ್ನುವುದನ್ನ ವಿವರಿಸುತ್ತಾರೆ.

ದೇವರು ಒಬ್ಬನಿದ್ದಾನೆ ಅವನು ಅವತಾರ ಪುರುಷನಲ್ಲ ಎಲ್ಲವನ್ನು ಸೃಷ್ಟಿಸಿದ ಅವನಿಗೆ ಮತ್ತೆ ಮತ್ತೆ ಅವತಾರವೆತ್ತಿ ಮುಕ್ತಿ ಕೊಡಬೇಕಾದ ಅವಶ್ಯಕತೆ ಇಲ್ಲ.ಇಲ್ಲಿ ನಮ್ಮನ್ನು ದೇವರು ಸೃಷ್ಟಿಸಿದ್ದು ಅಥವಾ ನಾವೇ ದೇವರನ್ನು ಸೃಷ್ಟಿಸಿದೆವೊ ಎನ್ನುವಂತಾಗಿದೆ.

ನಮ್ಮ ಕಲ್ಪನಾಶಕ್ತಿ ಗಳಿಗೆ ಹೆಸರುಕೊಟ್ಟು ದೇವರನ್ನು ನೂರು ಮಾಡಿದ್ದೇವೆ ಚೂರು ಮಾಡಿದ್ದೇವೆ ಅದು ಅವರವರ ನಂಬಿಕೆಗೆ ಬಿಟ್ಟಿದ್ದು.ಎಲ್ಲವೂ ನನಗೆ ಅರಿತಿದ್ದರೆ ಎಲ್ಲರಂತೆ ಬದುಕುತ್ತಿರಲಿಲ್ಲ.

ನಮ್ಮಲ್ಲಿರುವ ಅದೇಷ್ಟು ಸಂಪ್ರದಾಯಗಳನ್ನು ಬಯಲಿಗೆಳೆಯುತ್ತಾರೆ. ಯಾವುದು ಸತ್ಯ ಯಾವುದು ಅಂಧಕಾರ.. ಯಾಕಾಗಿ ಹುಟ್ಟಿದ್ದು .ಅದನ್ನು ಸೃಷ್ಟಿಸಿದವರ ಉದ್ದೇಶವೇನು? ಆ ಉದ್ದೇಶ ಮುಟ್ಟಿತೆ?
ಪುನರ್ಜನ್ಮವೆಂಬುದೊಂದಿದೆಯೇ. ಹಾಗಿದ್ದರೆ ನಾವೆಷ್ಟನೆ ಜನ್ಮ? ಎಷ್ಟೇ ನೆನಪಿಸಿಕೊಂಡರು ಹಳೆಯ ಜನ್ಮದ ನೆನಪೇಕೆ  ಬರುತ್ತಿಲ್ಲ.ಇಲ್ಲಿರುವ ಸಂಬಂಧಗಳು ನಮಗೆ ಅಲ್ಲೂ ಇತ್ತೆ?
ನೆನಪಿಗೆ ಬರದ ಸಂಬಂಧಗಳು ಇದ್ದರೆಷ್ಟು ಬಿಟ್ಟರೆಷ್ಟು.

ಹಿಂದೆ ಅದೆಷ್ಟು ಆಡಂಬರ ಗತವೈಭವ ಸಿರಿ-ಸಂಪತ್ತು ಸಂತೃಪ್ತಿ ಇತ್ತೆಂದು ಕೇಳಿದ್ದೇವೆ ಆದರೆ ನೋಡಿಲ್ಲ.
ಅಂತ ಗತವೈಭವ ಇದ್ದಿತೆ? ಅದು ಕೇವಲ ಕಲ್ಪನೆಯೆ?
ಉದಾಹರಣೆಗೆ ನೂರು ವರ್ಷದವರು ನಮಗೆ ಸಿಕ್ಕರೆ ಅವರಿಂದ ಇನ್ನೂ ನೂರು ವರ್ಷಗಳ ಇತಿಹಾಸ ಕೇಳಿ ತಿಳಿಯಬಹುದು.ಒಂದು ವೇಳೆ ಅವರನ್ನು ಕೇಳಿದ್ದೆ ಆದರೆ ಅವರು ಹೇಳುವ ಮಾತು, ಬರಿ ಮಾತಲ್ಲ  ಅನುಭವ. ಅಂದಿನ ಕಷ್ಟದ ಬದುಕು ಒಂದು ಊಟಕ್ಕೂ ಕಷ್ಟ ಪಡುತ್ತಿದ್ದಿದ್ದು ಇವೇ  ಮುಂಚೂಣಿಯಲ್ಲಿರುತ್ತವೆ.
ಹಾಗಾದರೆ ಯಾವುದು ಸತ್ಯ? ಕಲ್ಪನೆಯನ್ನುವುದು ಎಲ್ಲಾ ಸತ್ಯವನ್ನು ಮುಚ್ಚಿಡುವ ಪೊರೆಯೆ?ಅದನ್ನು ಕಳಚುವವರಾರು?.

ಅದೆಷ್ಟು ಗೊಡ್ಡು ಸಂಪ್ರದಾಯಗಳು ನಮ್ಮಲ್ಲಿದ್ದರೂ ನಮ್ಮ ಸಂಸ್ಕೃತಿಯ ಬಗ್ಗೆ ನಾವು ಹೊಗಳಿಕೊಳ್ಳುವುದು ಬಿಟ್ಟಿಲ್ಲ.ಅಂತಹ ಧೈರ್ಯವು ನಮಗೆ ಇನ್ನು ಬಂದಿಲ್ಲ. ಆದರೆ ಮೂಕಜ್ಜಿಯು ನಮ್ಮಲ್ಲಿರುವ ಕೇಳಲಾಗದ ಪ್ರತಿರೋಧಿಸಲು ಆಗದ ಹತ್ತು ಹಲವು ಪ್ರಶ್ನೆಗಳನ್ನು ಸವಾಲೆಸೆದು ಎದುರಿಸಿ ನಿಂತವರು.

ಸಾವಿರಾರು ವರ್ಷದ ಇತಿಹಾಸ ವನ್ನು ಕೆದಕುವ ಸಾಹಸ ಲೇಖಕರು ಮಾಡಿದ್ದಾರೆ.ಆದರೆ ಅವುಗಳಿಗೆಲ್ಲ ನಮ್ಮ ಆತ್ಮಸಾಕ್ಷಿಯ ನೇರಕ್ಕೆ ಉತ್ತರವನ್ನು ನಾವು ಅರಿಯಬೇಕು.

ಮೂಕಜ್ಜಿಯ ಅದೆಷ್ಟು ನೇರ ಉತ್ತರ ನೀಡಿದರೂ ನಮ್ಮ ಜ್ಞಾನಕ್ಕೆ ದೊರೆಯುವಂತದಲ್ಲ. ಆದರೆ ನಮ್ಮ ಚಿಂತನೆಗೆ ಕಿಚ್ಚು ಹೊತ್ತಿಸುವಂತದ್ದು.

ಕತೆಯಲ್ಲಿ ಲೇಖಕರು ಆರಿಸಿಕೊಂಡ ವಿಷಯ ಮತ್ತು ವಸ್ತು ವಿಶಿಷ್ಟವಾದದ್ದು.ಅವರ ತರ್ಕಬದ್ಧ ನಿರೂಪಣೆ ಮೆಚ್ಚುವಂಥದ್ದು.ಮೌಢ್ಯತೆಯ ಆಚರಣೆಯೊಂದಿಗೆ ಹುಟ್ಟಿಕೊಂಡ ಕಥೆ ,ಚೈತನ್ಯದ ಹೊಸ ಬದಲಾವಣೆಯೊಂದಿಗೆ ಮುಗಿಯುವದು‌ ವಿಶೇಷ.

ಇಲ್ಲಿ ನನ್ನ ಅರಿವಿನ ಶಕ್ತಿಗನುಗುಣವಾಗಿ ನನ್ನದೇ ನಿಲುವಲ್ಲಿ  ವಿಮರ್ಶಿಸಲು ಪ್ರಯತ್ನಿಸಿರುವೆ..
ನೀವು ಸಹ ಈ ಕಾದಂಬರಿಯನ್ನು ಮರೆಯದೆ ಓದುವಿರೆನ್ನುವ ಆಶಯ ನನ್ನದು. ಕಾದಂಬರಿ ಓದಿದ ನಂತರ ನಿಮ್ಮ ವಿಮರ್ಶೆಯನ್ನು ನನ್ನೊಂದಿಗೆ ಹಂಚಿಕೊಳ್ಳಿ.
ಪ್ರತಿಕ್ರಿಯಿಸುವದನ್ನು ಮರೆಯಬೇಡಿ..

ಕಾದಂಬರಿ: ಮೂಕಜ್ಜಿಯ ಕನಸುಗಳು
ಲೇಖಕರು: ಡಾ.ಕೆ.ಶಿವರಾಮ ಕಾರಂತ


ಹಿಂಗೇಕೆ ಕಾಡುವೆ..

 

ಹಿಂಗೇಕೆ ಕಾಡುವೆ..


ಬಾಳಿಗೆ ಸುಖವ ನೀ ಬಯಸಿ
ಪ್ರೀತಿಯ ಮಾತಿಗೆ ಸವಿ ಬೆರಸಿ
ಬಿಡದೆ ಕಾಡುವೆ ನನ್ನರಸಿ.

ಆಸೆ ಮೋಹದ ಸ್ವಾರ್ಥದಲಿ
ಯಾತನೆ ಅನುಭವ ನೋಟದಲಿ
ಕೃಷವಾದೆನು ನಾ ಸೇರುವ ತವಕದಲಿ

ನನ್ನಿ ಮನದಲಿ ಮನೆ ಮಾಡಿ
ಸವಿ ಮಾತಲ್ಲೆ ಮನಸ ಕೊಲೆ ಮಾಡಿ
ನೀ ಪಡೆದ ಸುಖವೇನು ಹೇಳುವೆಯಾ..

ಬಯಕೆಗೂ ಒಂದು ಮಿತಿಯಿದೆ
ಅದರಲೆ ನಿನ್ನ ಹಿತವಿದೆ.
ಸನಿಹ ಬಯಸಿದ ಒಲವಿನ ಕಥೆಯಿದೆ

ಬಾವನೆ ಬಣ್ಣದ ಬದುಕಿನಲಿ
ವ್ಯೂಹದ ಬಂಧನ ಬೀತಿಯಲಿ
ಪ್ರೇಮವು ಸಾಗಿದೆ ಜೊತೆಯಲಿ.


ಚಿತ್ರ ಕವಿತ್ವ



ಹೊತ್ತು ಸಾಗುವ ಮುನ್ನ
ಬಂದು(ಧು) ಸೇರುವ ಮುನ್ನ
ನೀನೆ ಬಾ..ಮೊದಲೇ ಬಾ..

ವಿವರಣೆ: ಇಲ್ಲಿನ ಸಾಲುಗಳು ಎರೆಡೆರಡು ಆರ್ಥ ಕೊಡುವಂತವುಗಳು.
ಇಲ್ಲಿ ಖುಷಿ ಹಾಗೂ ದುಃಖ ಎರಡು ಒಂದೇ ಸಾಲಿನಲ್ಲಿ ಅಡಕವಾಗಿದೆ..
ಸನ್ನಿವೇಶ ೧:  ಇಬ್ಬರು ಪ್ರೇಮಿಗಳು ಇಬ್ಬರಲ್ಲೂ ಪ್ರೀತಿ ಸೆಳೆತವಿದೆ.ಅಲ್ಲಿ ಖುಷಿ ಇದೆ..ಪ್ರಿಯಕರ ಪ್ರಿಯತಮೆಗೆ ಹೇಳುತ್ತಾನೆ. "ಗೆಳತಿ  ಸಂಜೆಯಾಗುವ ಮುನ್ನ ,ನಾನು ನಿನ್ನೆಡೆಗೆ ಬರುವ ಮುನ್ನ, ನೀನೆ ಮೊದಲು ನನ್ನ ಬಳಿ ಬಾ" ಎಂದು ಕರೆಯುತ್ತಾನೆ.

ಸನ್ನಿವೇಶ ೨: ಇಲ್ಲಿ ಏಕಮುಖ ಪ್ರೀತಿ.ಪ್ರೀಯತಮೆ ಎಂದೂ ಪ್ರಿಯಕರನ ಸ್ನೇಹ ಒಪ್ಪಿಕೊಂಡಿಲ್ಲ.ಬೇಸತ್ತ ಪ್ರಿಯಕರ ವಿರಹಿಯಾಗಿ ದುಃಖದಲ್ಲಿ ಹೀಗೆ ಹೇಳುತ್ತಾನೆ." ನಾನು ನಿನ್ನ ಬಿಟ್ಟು ಬದುಕಲಾರೆನು,ನಾನು ಸತ್ತಾಗ ಹೊತ್ತು ಸಾಗುವ ಮುನ್ನ, ನನ್ನ ಬಂಧುಗಳು ಸೇರುವ ಮುನ್ನ,ಆಗಲಾದರೂ ನನ್ನ ನೋಡಲು ಮೊದಲು ನೀ ಬಾ"